ಹುಬ್ಬಳ್ಳಿ :ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಯನ್ನು ಸೆ.15ರೊಳಗೆ ನೀಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಆದರೆ, ಆ ಕಾಲಾವಧಿ ಮೀರಿದೆ. ಸಿಎಂ ಬಸವರಾಜ ಎಸ್ ಬೊಮ್ಮಾಯಿ ಮೀಸಲಾತಿ ನೀಡುತ್ತಾರೆ ಎಂಬ ನಂಬಿಕೆ ಇದೆ. ಮೀಸಲಾತಿ ಸಿಗದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಕೂಡಲಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೀಡಿದ್ದಾರೆ.
ಸರ್ಕಾರಕ್ಕೆ ಗಡುವು ನೀಡಿದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ.. ನಗರದ ಚೆನ್ನಮ್ನ ವೃತ್ತದಲ್ಲಿ ಶಾಸಕ ಅರವಿಂದ ಬೆಲ್ಲದ್, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಆಯೋಜಿಸಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಸ್ವಾಮೀಜಿ ಮಾತನಾಡಿದರು.
ಈಗಾಗಲೇ ನಾವು ಐತಿಹಾಸಿಕ ಪಾದಯಾತ್ರೆ ಮಾಡಿದ್ದೇವೆ. ಸೆ.15ರೊಳಗೆ ಮೀಸಲಾತಿ ನೀಡುತ್ತೇವೆ ಎಂದು ಸರ್ಕಾರ ಭರವಸೆ ನೀಡಿತ್ತು. ಈಗ ಕಾಲಾವಕಾಶ ಮೀರಿದೆ. ನಮ್ಮ ಹೋರಾಟ 31ನೇ ದಿನಕ್ಕೆ ಕಾಲಿಟ್ಟಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ನೀಡುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.
ಸದನದಲ್ಲಿ ನಮ್ಮಗೆ ಸರಿಯಾಗಿ ಉತ್ತರ ನೀಡಿಲ್ಲ. ನನ್ನ ಜೊತೆ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ. ಮೀಸಲಾತಿ ಸಿಗದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಸಿಎಂ ವರದಿ ತರಿಸಿಕೊಂಡು ಮೀಸಲಾತಿ ನೀಡುವ ಭರವಸೆ ನೀಡಿದ್ದಾರೆ. ಅ.1ರೊಳಗೆ ಮೀಸಲಾತಿ ನೀಡಬೇಕು. ನೀಡಿದರೆ ಸಿಎಂಗೆ ಕಲ್ಲು ಸಕ್ಕರೆ ತುಲಾಭಾರ ಮಾಡುತ್ತೇವೆ ಎಂದರು.
ಮೀಸಲಾತಿ ಸಿಗುತ್ತದೆ ಎನ್ನುವ ಭರವಸೆ ಇದೆ :ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ಈಗಾಗಲೇ ಎಲ್ಲರೂ ಹೋರಾಟ ಕೈಗೊಂಡಿದ್ದಾರೆ. ಸಮುದಾಯದ ಎಲ್ಲರಿಗೂ ಮೀಸಲಾತಿ ಸಿಗುತ್ತದೆ ಎನ್ನುವ ಭರವಸೆ ಇದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ವಿಜಯಾನಂದ ಕಾಶಪ್ಪನವರ, ಶಾಸಕ ಅರವಿಂದ ಬೆಲ್ಲದ್ ಮೀಸಲಾತಿ ಕುರಿತು ಪ್ರತಿಕ್ರಿಯೆ ನೀಡಿರುವುದು.. ನಗರದ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಈಗಾಗಲೇ ನಾವೂ 99 ಮೆಟ್ಟಿಲು ಏರಿದ್ದೇವೆ. ಇನ್ನೊಂದು ಮೆಟ್ಟಿಲು ಮಾತ್ರ ಬಾಕಿ ಇದೆ. ಸಿಎಂ ಬೊಮ್ಮಾಯಿ ಅವರು ಮೀಸಲಾತಿ ನೀಡಿದ್ರೆ ಅವರಿಗೂ ಗೌರವ, ನಮಗೂ ಗೌರವ. ಮುಖ್ಯಮಂತ್ರಿಗಳು ನಮ್ಮ ಸಮಾಜಕ್ಕೆ ನೀಡಿದ ಮಾತನ್ನು ಉಳಿಸಿಕೊಳ್ಳಬೇಕು ಎಂದರು.
ಮೀಸಲಾತಿ ವಿಚಾರವಾಗಿ ಸದನದಲ್ಲಿ ನಮಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಸ್ಪಷ್ಟವಾದ ನಿರ್ಣಯ ಬಂದಿಲ್ಲ. ಹೋರಾಟ ಬೆಂಗಳೂರು ತಲುಪುವ ಮುನ್ನ ಸರ್ಕಾರದಿಂದ ಸ್ಪಷ್ಟ ಉತ್ತರ ದೊರೆಯಬೇಕು. ಸರ್ಕಾರ ಕೊಟ್ಟ ಮಾತಿನಂತೆ ನಡೆಯದಿದ್ದರೆ ರಾಜ್ಯದಲ್ಲಿ ದೊಡ್ಡ ಕ್ರಾಂತಿಯೇ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಸಿಎಂ ನಮ್ಮ ಸಮಾಜಕ್ಕೆ ನ್ಯಾಯ ಕೊಡುವ ಭರವಸೆ ಇದೆ :ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂಬುದು ಎಲ್ಲಾ ಪಂಚಮಸಾಲಿಗಳ ಬೇಡಿಕೆಯಾಗಿದೆ. ಹಿಂದುಳಿದ ಆಯೋಗ ಆದಷ್ಟು ಬೇಗ ತೀರ್ಮಾನ ಕೈಗೊಳ್ಳಬೇಕು. ನಾನು, ಬಸವನಗೌಡ ಪಾಟೀಲ ಯತ್ನಾಳ್ ಸದನದ ಬಾವಿಯೊಳಗೆ ಇಳಿದು ಹೋರಾಟ ಮಾಡಿದ್ದೇವೆ. ನಮ್ಮ ಹೋರಾಟದ ವೇಳೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಸಿಎಂ ನಮಗೆ ನ್ಯಾಯ ಕೊಡುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಇದೇ ವೇಳೆ ಶಾಸಕ ಅರವಿಂದ ಬೆಲ್ಲದ್ ಹೇಳಿದರು.
ಇದನ್ನೂ ಓದಿ: ಪಂಚಮಸಾಲಿಗೆ 2ಎ ಮೀಸಲಾತಿ ನೀಡಬಾರದೆಂಬ ಉದ್ದೇಶ ಬಿಎಸ್‌ವೈಗಿತ್ತು: ಯತ್ನಾಳ್