ಧಾರವಾಡ:ನಿತ್ಯವೂ ಸಾವಿರಾರು ಜನರ ಆರೋಗ್ಯ ಕಾಪಾಡುವ ಜಿಲ್ಲಾಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಕಳೆದ ಕೆಲ ದಿನಗಳಿಂದ ಆಸ್ಪತ್ರೆಗೆ ನೀರು ಸರಬರಾಜು ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಜಿಲ್ಲಾ ಆಸ್ಪತ್ರೆ ಧಾರವಾಡ ಜಿಲ್ಲೆಗೆ ಮಾತ್ರವೇ ಸಿಮೀತವಾಗಿರುವ ಆಸ್ಪತ್ರೆಯಲ್ಲ. ಬದಲಿಗೆ ಉತ್ತರ ಕನ್ನಡ ಜಿಲ್ಲೆಯ ಎರಡು ಹಾಗೂ ಬೆಳಗಾವಿ ಜಿಲ್ಲೆಯ ಮೂರು ತಾಲೂಕಿನ ಜನರಿಗೂ ಇದೇ ಆಸ್ಪತ್ರೆಯೆ ಆಧಾರವಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್ಗಳಿಗೆ ನೀರು ಪೂರೈಕೆ ಮಾಡುವ ಜವಾಬ್ದಾರಿಯನ್ನು ಈಗಾಗಲೇ ಸರ್ಕಾರ ಜಲಮಂಡಳಿಯಿಂದ ಎಲ್ ಅಂಡ್ ಟಿ ಎಂಬ ಖಾಸಗಿ ಕಂಪನಿಗೆ ವಹಿಸಿ ಒಂದು ವರ್ಷ ಕಳೆದಿದೆ. ಆದರೆ, ಕಂಪನಿ ಅಡಿ ಸಮರ್ಪಕ ನೀರು ಪೂರೈಕೆ ಮಾತ್ರ ಇನ್ನುವರೆಗೂ ಆಗಿಲ್ಲ. ಸದ್ಯ ಅವಳಿ ನಗರದ ಅನೇಕ ಪ್ರದೇಶಗಳಿಗೆ 15 ದಿನ ಕಳೆದರೂ ನೀರು ಬಂದಿಲ್ಲ. ಇದರ ಮಧ್ಯೆಯೆ ಈಗ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿಯೂ ರೋಗಿಗಳು ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸುವುದಕ್ಕೇ ಹುಬ್ಬಳ್ಳಿ ಧಾರವಾಡಕ್ಕೆ ನೀರು ಪೂರೈಕೆ ಮಾಡಲು ಗುತ್ತಿಗೆ ಪಡೆದಿರುವ ಎಲ್ ಅಂಡ್ ಟಿ ಕಂಪನಿಯೇ ಕಾರಣ ಎಂದು ಆರೋಪ ಕೇಳಿ ಬರುತ್ತಿದೆ. ಯಾಕೆಂದರೆ ಅವಳಿ ನಗರದ ಅನೇಕ ಪ್ರದೇಶಗಳಲ್ಲಿ ಹದಿನೈದು ದಿನ ಕಳೆದರೂ ಸರಿಯಾಗಿ ನೀರು ಪೂರೈಕೆ ಆಗಿಲ್ಲ. ಜಿಲ್ಲಾಸ್ಪತ್ರೆ ಇರುವ ಪ್ರದೇಶಕ್ಕೂ ಇದೇ ಸ್ಥಿತಿ ಆಗಿದೆ. ಹೀಗಾಗಿ ಸಹಜವಾಗಿಯೇ ಜಿಲ್ಲಾ ಆಸ್ಪತ್ರೆಯಲ್ಲಿ ಹೀಗೆ ನೀರಿನ ಬರ ಉಂಟಾಗಿದೆ ಎನ್ನಲಾಗಿದೆ.