ಹುಬ್ಬಳ್ಳಿ: ನಗರಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಘನ ತ್ಯಾಜ್ಯ ಉತ್ಪಾದನೆಯೂ ಹೆಚ್ಚುತ್ತಿದೆ. ಕಸ ಸಂಗ್ರಹಣೆಯು ಒಂದು ದೊಡ್ಡ ಸವಾಲೇ ಆಗಿದ್ದು, ಮಹಾನಗರ ಪಾಲಿಕೆಗಳಿಗೆ ತಲೆನೋವಾಗಿ ಪರಿಣಮಿಸಿವೆ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಾತ್ರ ಇದಕ್ಕೆ ಅವಕಾಶವಿಲ್ಲ. ಹಸಿ ಮತ್ತು ಒಣ ಕಸ ವಿಂಗಡಣೆ ನಿಯಮಗಳನ್ನು ಮಹಾನಗರ ಪಾಲಿಕೆ ಕಟ್ಟುನಿಟ್ಟಾಗಿ ಜಾರಿ ಮಾಡಿದೆ.
ಘನ ತ್ಯಾಜ್ಯ ಸಮರ್ಪಕ ನಿರ್ವಹಣೆ ಜತೆಗೆ ಭೂಭರ್ತಿ (ಲ್ಯಾಂಡ್ ಫಿಲ್ಲಿಂಗ್) ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವುದು, ಪರಿಸರ ಸಂರಕ್ಷಣೆ ಹಾಗೂ ಮರು ಬಳಕೆಯ ವಸ್ತುಗಳನ್ನು ತ್ಯಾಜ್ಯದಿಂದ ವಿಂಗಡಿಸುವ ಕೆಲಸವನ್ನು ಪಾಲಿಕೆ ಮಾಡುತ್ತಿದೆ.
ಎರಡು ವರ್ಷಗಳ ಹಿಂದೆಯೇ ಪಾಲಿಕೆ ಆಟೋ ಟಿಪ್ಪರ್ ಮೂಲಕ ಮನೆ-ಮನೆ ತೆರಳಿ ಕಸ ಸಂಗ್ರಹಣೆ ಕಾರ್ಯಕ್ಕೆ ಚಾಲನೆ ನೀಡಿದ್ದು, ಆರಂಭಿಕ ಹಂತದಲ್ಲೇ ಕಸ ವಿಂಗಡಣೆ ಮಾಡಲಾಗುತ್ತದೆ. ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ಕಾಂಪೋಸ್ಟ್ ಗೊಬ್ಬರವನ್ನಾಗಿ ತಯಾರಿಸಲಾಗುತ್ತದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ನಿತ್ಯ 400 ಟನ್ ಘನ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಹುಬ್ಬಳ್ಳಿಯಲ್ಲಿ 280 ಟನ್ ಹಾಗೂ ಧಾರವಾಡದಲ್ಲಿ 120 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಪಾಲಿಕೆಯು 191 ಆಟೋ ಟಿಪ್ಪರ್‌ಗಳನ್ನು ನಿಯೋಜಿಸಿ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಣೆ ಮಾಡುತ್ತಿದೆ. ಸುಮಾರು 72 ಟ್ರ್ಯಾಕ್ಟರ್‌ಗಳಿಂದ ಮಾರುಕಟ್ಟೆ ತ್ಯಾಜ್ಯ ಹಾಗೂ ಇತರೆ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗುತ್ತಿದೆ.