ಧಾರವಾಡ: ಮುಂಬರುವ ವಿಧಾನಸಭೆ ಚುನಾವಣೆಗೆ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಈಗಿನಿಂದಲೇ ಪೈಪೋಟಿ ಶುರುವಾಗಿದೆ. ಶಾಸಕ ಅಮೃತ್ ದೇಸಾಯಿಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಟಕ್ಕರ್ ಕೊಡಲು ಮುಂದಾಗಿದ್ದಾರೆ.
ಹೌದು, ಶಾಸಕ ಅಮೃತ ದೇಸಾಯಿ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಕುಲಕರ್ಣಿ ಸಜ್ಜಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಇದೇ 7 ರಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಜನ್ಮ ದಿನದ ಅಂಗವಾಗಿ ವಿನಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಸುಮಾರು 2 ಲಕ್ಷ ಜನರನ್ನು ಸೇರಿಸಲು ವಿನಯ್ ಕುಲಕರ್ಣಿ ಅಭಿಮಾನಿಗಳು ಹಾಗೂ ಬೆಂಬಲಿಗರು ಸಿದ್ಧತೆ ಮಾಡಿಕೊಂಡಿದ್ದಾರೆ.
ಯೋಗೇಶ್ ಗೌಡ ಕೊಲೆ ಪ್ರಕರಣದ ಬಳಿಕ ಜಿಲ್ಲೆಯಿಂದ ವಿನಯ್ ಕುಲಕರ್ಣಿ ಹೊರಗುಳಿದಿದ್ದಾರೆ. ಹೀಗಾಗಿ, ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಕಿತ್ತೂರಿನಿಂದಲೇ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ, ಧಾರವಾಡಕ್ಕೆ ಬಂದೇ ಬರುತ್ತೇನೆ ಎಂದು ಕುಲಕರ್ಣಿ ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಹೀಗಾಗಿ, ಕಳೆದ 15 ದಿನಗಳ ಹಿಂದೆ ಧಾರವಾಡದಲ್ಲಿ ನಡೆದ ಸಂಕಲ್ಪ ಸಭೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಶಾಸಕ ಅಮೃತ್ ದೇಸಾಯಿ ಸವಾಲ್ ಹಾಕಿದ್ದರು.