ಹುಬ್ಬಳ್ಳಿ/ಧಾರವಾಡ :ಹೆಚ್ಚಿನ ವಿಚಾರಣೆಗಾಗಿ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ಹುಬ್ಬಳ್ಳಿಗೆ ಕರೆತರಲಾಗಿದೆ. ಸಿಬಿಐ ವಿಚಾರಣೆಯಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜನ್ಮದಿನವನ್ನು ನಗರದ ಹೊರವಲಯದ ಸಿಎಆರ್ ಮೈದಾನದ ಬಳಿ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಲಾಯಿತು.
ನೂರಾರು ಕಾರ್ಯಕರ್ತರು ಹಾಗೂ ಕಾಂಗ್ರೆಸ್ ನಾಯಕರು ರಸ್ತೆಯ ಪಕ್ಕದಲ್ಲೇ ಕೇಕ್ ಕತ್ತರಿಸುವ ಮೂಲಕ ವಿನಯ ಕುಲಕರ್ಣಿ ಅವರ 52 ನೇ ವರ್ಷದ ಹುಟ್ಟು ಹಬ್ಬ ಆಚರಿಸಿದರು.
ಇದೇ ವೇಳೆ ಮಾತನಾಡಿದ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ ಪಾಟೀಲ್, ಬಿಜೆಪಿಯವರು ಏನೇ ಕುತಂತ್ರ ಮಾಡಿದರು. ವಿನಯ ಕುಲಕರ್ಣಿ ಅವರಿಗೆ ಏನು ತೊಂದರೆ ಆಗುವುದಿಲ್ಲ. ಅಲ್ಲದೇ ವಿನಯ ಕುಲಕರ್ಣಿ ಅವರು ಯಾವುದೇ ತಪ್ಪು ಮಾಡಿಲ್ಲ ಎಂದರು.
ಬಿಜೆಪಿಗರು ಡಿ.ಕೆ.ಶಿವಕುಮಾರ್ ಅವರಿಗೆ ಹಲವಾರು ಕುತಂತ್ರ ಮಾಡಿದರು. ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. ಈ ನಿಟ್ಟಿನಲ್ಲಿ ವಿನಯ ಕುಲಕರ್ಣಿ ಅವರು ಕೂಡ ಉನ್ನತ ಸ್ಥಾನಕ್ಕೆ ಏರುವ ಮೂಲಕ ಬಿಜೆಪಿ ಕುತಂತ್ರಕ್ಕೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಶದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ವಿಚಾರಣೆಗಾಗಿ ಹುಬ್ಬಳ್ಳಿಗೆ ಕರೆ ತರಲಾಗಿದೆ. ವಿನಯ ಕುಲಕರ್ಣಿ ಆಪ್ತ ಸೋಮು ನ್ಯಾಮಗೌಡರನ್ನು ಸಹ ಸಿಬಿಐ ಅಧಿಕಾರಿಗಳು ಹುಬ್ಬಳ್ಳಿಗೆ ಕರೆತಂದಿದ್ದಾರೆ.
ಹುಬ್ಬಳ್ಳಿ ಸಿಎಆರ್ ಮೈದಾನದಲ್ಲಿ ವಿನಯ ಕುಲಕರ್ಣಿ ವಿಚಾರಣೆ ಧಾರವಾಡ ಉಪನಗರ ಠಾಣೆಯಲ್ಲಿದ್ದ ಸೋಮು ನ್ಯಾಮಗೌಡರನ್ನು, ಹುಬ್ಬಳ್ಳಿಯ ಸಿಎಆರ್ ಗ್ರೌಂಡ್ಗೆ ಕರೆತಂದಿದ್ದಾರೆ. ವಿನಯ ಕುಲಕರ್ಣಿ ಆಪ್ತ ಸಹಾಯಕರಾಗಿದ್ದ ಸೋಮು ನ್ಯಾಮಗೌಡ ಮತ್ತು ವಿನಯ ಕುಲಕರ್ಣಿ ಇಬ್ಬರನ್ನೂ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಸಿಎಆರ್ ಮೈದಾನದಲ್ಲಿನ ಕೊಠಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ನಿನ್ನೆ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ನ್ಯಾಯಾಲಯ ತೀರ್ಪು ನೀಡಿತ್ತು. ಈ ಹಿನ್ನೆಲೆ ಸಿಬಿಐ ಅಧಿಕಾರಿಗಳು ವಿನಯ ಕುಲಕರ್ಣಿ ಹಾಗೂ ಅವರ ಆಪ್ತ ಸಹಾಯಕನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.