ಧಾರವಾಡ: ಪತ್ನಿಗೆ ಜಿಪಿಎ (ಜನರಲ್ ಪಾವರ್ ಆಫ್ ಅಟಾರ್ನಿ) ನೀಡಲು ಒಂಭತ್ತು ತಿಂಗಳ ಬಳಿಕ ಬೆಳಗಾವಿ ಜೈಲಿನಿಂದ ಧಾರವಾಡಕ್ಕೆ ಆಗಮಿಸಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಮರಳಿ ಬೆಳಗಾವಿ ಹಿಂಡಲಗಾ ಜೈಲಿನತ್ತ ತೆರಳಿದರು.
ಧಾರವಾಡದ ಮಿನಿ ವಿಧಾನಸೌಧದಲ್ಲಿರುವ ಉಪನೋಂದಣಿ ಕಚೇರಿಗೆ ಆಗಮಿಸಿದ ಮಾಜಿ ಸಚಿವ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಅವರಿಗೆ ಸಾಮಾನ್ಯ ಅಧಿಕಾರ ಪತ್ರ ವಹಿಸಲು (ಜಿಪಿಎ) ಧಾರವಾಡಕ್ಕೆ ಆಗಮಿಸಿದ್ದರು. ಉಪನೋಂದಣಾಧಿಕಾರಿ ಕಚೇರಿಯಿಂದ ಹಳೇ ಡಿಎಸ್ಪಿ ಸರ್ಕಲ್ನಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿನಯ್ ಹಾಗೂ ಪತ್ನಿ ಶಿವಲೀಲಾ ಹೆಸರಲ್ಲಿ ಜಂಟಿ ಖಾತೆ ತೆರೆದರು.
ಧಾರವಾಡಕ್ಕೆ ವಿನಯ್ ಕುಲಕರ್ಣಿ ಅಭಿಮಾನಿಗಳಿಂದ ಘೋಷಣೆ ಹಣಕಾಸು ವ್ಯವಹಾರ ನಿಭಾಯಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಪಿಎ ನೀಡಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಪಿಎ ನೀಡಲು ಹಾಗೂ ಬ್ಯಾಂಕ್‌ನಲ್ಲಿ ಜಂಟಿ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗಿತ್ತು.
ಅಭಿಮಾನಿಗಳತ್ತ ಕೈಬೀಸಿದ ವಿನಯ್ ಕುಲಕರ್ಣಿ:
ಧಾರವಾಡಕ್ಕೆ ವಿನಯ್ ಕುಲಕರ್ಣಿ ಬೆಳಗಾವಿಯಿಂದ ನೇರವಾಗಿ ಧಾರವಾಡ ಮಿನಿವಿಧಾನಸೌಧದಲ್ಲಿರುವ ಉಪನೋಂದಣಾಧಿಕಾರಿ ಕಚೇರಿಗೆ ಆಗಮಿಸಿ ಜಿಪಿಎ ಪ್ರಕ್ರೀಯೆ ಮುಗಿಸಿ ಬ್ಯಾಂಕ್ಗೆ ಹೋಗುವ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಅಭಿಮಾನಿಗಳತ್ತ ಕೈಬೀಸಿದರು. ಅಣ್ಣಾ ಆರಾಮಾ? ಅಂತ ಅಭಿಮಾನಿಗಳು ಕೇಳಿದರು. ಮುಂದೇನಣ್ಣಾ? ಅಂದ ವೇಳೆ 'ಏನು ಮಾಡಕ್ಕಾಗಲ್ಲ' ಎಂದು ವಿನಯ್ ಕುಲಕರ್ಣಿ ಅಭಿಮಾನಿಗಳಿಗೆ ಪ್ರತಿಕ್ರಿಯಿಸಿದರು.
ಪೊಲೀಸರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಗರಂ :
ಬೆಳಗಾವಿ ಹಿಂಡಲಗಾ ಜೈಲಿಗೆ ಮರಳಿದ ಮಾಜಿ ಸಚಿವ ವಿನಯ ಕುಲಕರ್ಣಿ ನೋಡಲು ಅವಕಾಶ ಕಲ್ಪಿಸದ ಹಿನ್ನೆಲೆ, ಪೊಲೀಸರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ವಿನಯ ಪರ ಜೈಕಾರ ಹಾಕಿದರು. ಸ್ಥಳಕ್ಕೆ ಆಗಮಿಸಿದ ಹಿರಿಯ ಅಧಿಕಾರಿಗಳು ಬೆಂಬಲಿಗರನ್ನು ಸಮಾಧಾನಪಡಿಸಿದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದಾರೆ.