ಹುಬ್ಬಳ್ಳಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಡಿಸಿರುವ 2023-24 ನೇ ಸಾಲಿನ ರಾಜ್ಯ ಬಜೆಟ್ ಸಮತೋಲಿತ ಹಾಗೂ ದೂರದೃಷ್ಟಿಯ ಬಜೆಟ್ ಆಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜವಳಿ ಹೇಳಿದರು. ಬಜೆಟ್ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗೆ ಪೂರಕವಾದ ಬಜೆಟ್. ಕೃಷಿ, ಉದ್ಯಮ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಸೇರಿದಂತೆ ಅನೇಕ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದರು.
ಶಿಕ್ಷಣಕ್ಕೆ ಶೇ.20 ರಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ರೈತರಿಗೆ 3 ರಿಂದ 5 ಲಕ್ಷದ ವರೆಗೆ ಬಡ್ಡಿರಹಿತ ಸಾಲ ನೀಡಲು ಘೋಷಣೆ ಮಾಡಲಾಗಿದೆ. ಆರೋಗ್ಯಕ್ಕಾಗಿ 428 ನಮ್ಮ ಕ್ಲಿನಿಕ್ ಸ್ಥಾಪನೆ, ಶಿಕ್ಷಣ ಕ್ಷೇತ್ರದಲ್ಲಿ 7 ಹೊಸ ವಿವಿ, ಒಂದು ವೈದ್ಯಕೀಯ ಕಾಲೇಜು ಸ್ಥಾಪನೆಯ ಬಗ್ಗೆ ಪ್ರಕಟಿಸಿದ್ದಾರೆ. ಮಹದಾಯಿಗೆ ಮತ್ತು ಕಳಸಾ ಬಂಡೂರಿಗೂ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಮಹದಾಯಿಗೆ 1 ಸಾವಿರ ಕೋಟಿ ರೂ, ಕಳಸಾ-ಬಂಡೂರಿಗೆ 80 ಕೋಟಿ ರೂ ಅನುದಾನ ಘೋಷಣೆ ಮಾಡಲಾಗಿದೆ. ಈ ಭಾಗದ ರೈತರಿಗೆ ಇದರಿಂದ ಹೆಚ್ಚಿನ ಅನುಕೂಲ ಆಗಲಿದೆ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಒತ್ತು ನೀಡಲಾಗಿದೆ. ಒಳಚರಂಡಿ ವ್ಯವಸ್ಥೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಕ್ರೀಡೆಗೂ ವಿಶೇಷ ಮಹತ್ವ ನೀಡಲಾಗಿದ್ದು ಸುಮಾರು 50 ಕೋಟಿ ರೂ. ವರೆಗೆ ಮೀಸಲಿಟ್ಟಿದ್ದಾರೆ. ಶಾಲಾ ವಿದ್ಯಾರ್ಥಿಗಳು, ಯುವಕರಿಗೆ ಪ್ರೋತ್ಸಾಹ ನೀಡಲಾಗಿದೆ ಎಂದರು.