ಹುಬ್ಬಳ್ಳಿ :ವಿಧಾನಸಭೆ ಚುನಾವಣೆ ಎದುರಿಸಲು ಬಿಜೆಪಿ ಹಲವು ಕಾರ್ಯಕ್ರಮ, ಯೋಜನೆಗಳನ್ನು ಹಮ್ಮಿಕೊಂಡಿದೆ. ಬೂತ್ ವಿಜಯ, ಸಂಕಲ್ಪ ಅಭಿಯಾನದ ಮೂಲಕ ತಳಮಟ್ಟದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಕೈಗೊಂಡಿದ್ದೇವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ತಿಳಿಸಿದರು. ರಾಜ್ಯದಲ್ಲಿ ಮಿಷನ್ 150 ಗುರಿಯಾಗಿಸಿಕೊಂಡು ಮತ್ತು ದಾವಣಗೆರೆಯನ್ನು ಕೇಂದ್ರವನ್ನಾಗಿಸಿಕೊಂಡು ಬಿಜೆಪಿ 4 ತಂಡಗಳ ಮೂಲಕ 4 ದಿಕ್ಕುಗಳಿಂದ 31 ಜಿಲ್ಲೆ 224 ವಿಧಾನಸಭಾ ಕ್ಷೇತ್ರಗಳನ್ನು ಸಂಪರ್ಕಿಸಿ ಒಟ್ಟು 4 ಕೋಟಿ ಜನರನ್ನು ತಲುಪಲಿದೆ ಎಂದು ಮಾಹಿತಿ ನೀಡಿದರು.
ಮೊದಲ ಯಾತ್ರೆ: ಈ ಯಾತ್ರೆಗೆ ಮಾ.1 ರಂದು ಮಹದೇಶ್ವರ ಬೆಟ್ಟದಿಂದ ಚಾಲನೆ ದೊರೆಯಲಿದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಉದ್ಘಾಟನೆ ಮಾಡಲಿದ್ದಾರೆ. ಯಾತ್ರೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಹಿಸಲಿದ್ದಾರೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ವಿ.ಸೋಮಣ್ಣ, ಕೆ.ಸಿ.ನಾರಾಯಣ ಗೌಡ, ಸುನಿಲ್ ಕುಮಾರ, ಶ್ರೀನಿವಾಸ ಪ್ರಸಾದ್, ಎನ್.ಮಹೇಶ್, ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಕೊಡುಗು, ದಕ್ಷಿಣ ಕನ್ನಡ ಹಾಗು ಉಡುಪಿ ಮಾರ್ಗವಾಗಿ ದಾವಣಗೆರೆ ತಲುಪಲಿದೆ ಎಂದರು.
ಎರಡನೇ ಯಾತ್ರೆ:ಎರಡನೇ ತಂಡ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಮಾ.2 ರಂದು ಖಾನಾಪುರ ತಾಲೂಕಿನ ನಂದಗಡದಿಂದ ಪ್ರಾರಂಭವಾಗಲಿದ್ದು, ಕೇಂದ್ರ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡುವರು. ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ, ಮುರುಗೇಶ ನಿರಾಣಿ, ಶಿವರಾಮ್ ಹೆಬ್ಬಾರ್ ಇರಲಿದ್ದಾರೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಉತ್ತರ ಕನ್ನಡ, ಹಾವೇರಿ ನಂತರ ದಾವಣಗೆರೆ ತಲುಪಲಿದೆ.
ಮೂರನೇ ಯಾತ್ರೆ:ಬಸವ ಕಲ್ಯಾಣದಿಂದ ಈ ಯಾತ್ರೆ ಶುರುವಾಗಲಿದ್ದು ಮಾಜಿ ಮುಖ್ಯಮಂತ್ರಿ ಶೆಟ್ಟರ್ ನೇತೃತ್ವ ವಹಿಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ಕೊಡಲಿದ್ದಾರೆ. ಇವರೊಂದಿಗೆ ಬಿ.ಶ್ರೀರಾಮುಲು, ಭಗವಂತ ಕೂಬಾ, ಪ್ರಭು ಚೌಹಾನ್, ಹಾಲಪ್ಪ ಆಚಾರ್, ಆನಂದ್ ಸಿಂಗ್, ಅರವಿಂದ ಲಿಂಬಾವಳಿ ಸೇರಿದಂತೆ ಮುಂತಾದ ನಾಯಕರು ಜೊತೆಗಿರಲಿದ್ದಾರೆ. ಯಾತ್ರೆಯು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಮಾರ್ಗವಾಗಿ ದಾವಣಗೆರೆ ಸಂಪರ್ಕಿಸಲಿದೆ.