ಹುಬ್ಬಳ್ಳಿ: ರಾಜ್ಯ ರಾಜಕೀಯದ ಜಿದ್ದಾಜಿದ್ದಿ ಕಣದಲ್ಲಿ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರ ಕೂಡ ಒಂದು. ಕಾಂಗ್ರೆಸ್ನಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಣದಲ್ಲಿದ್ದರೆ, ಬಿಜೆಪಿಯಿಂದ ಅವರ ಶಿಷ್ಯ ಮಹೇಶ್ ಟೆಂಗಿನಕಾಯಿ ಪ್ರತಿಸ್ಪರ್ಧಿಯಾಗಿದ್ದಾರೆ. ಉಳಿದಂತೆ ಜೆಡಿಎಸ್ ಹಾಗೂ ಇತರೆ ರಾಜಕೀಯ ಪಕ್ಷಗಳು ಕೂಡ ಪೈಪೋಟಿಗೆ ಇಳಿದಿವೆ.
ಇದೇ ಕ್ಷೇತ್ರದಿಂದ ಗೆದ್ದ ಎಸ್. ಆರ್. ಬೊಮ್ಮಾಯಿ 11ನೇ ಮುಖ್ಯಮಂತ್ರಿಯಾಗಿದ್ದರು. ಬಳಿಕ ಇದೇ ಕ್ಷೇತ್ರದಿಂದ ಗೆದ್ದ ಜಗದೀಶ್ ಶೆಟ್ಟರ್ ಕೂಡ 21ನೇ ಮುಖ್ಯಮಂತ್ರಿಯಾಗಿದ್ದರು. ಆಗಿನಿಂದ ಈಗಲೂ ನಾನಾ ಕಾರಣಗಳಿಂದ ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿಯೇ ಉಳಿದಿದೆ. ಸದ್ಯ ಬದಲಾದ ರಾಜಕೀಯ ಬೆಳವಣಿಗೆ ಹಾಗೂ ಸನ್ನಿವೇಶಗಳಿಂದ ಇತ್ತೀಚೆಗೆ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್ ಅವರ ನಡೆಯಿಂದ ಕ್ಷೇತ್ರ ಮತ್ತೆ ಗಮನ ಸೆಳೆಯುತ್ತಿದೆ. ಕ್ಷೇತ್ರದಲ್ಲಿ ನೇರ ಹಣಾಹಣಿ ಇದ್ದು, ಅವರನ್ನು ಸೋಲಿಸುವ ಹಠಕ್ಕೆ ಬಿದ್ದಿರುವ ಬಿಜೆಪಿ, ಇನ್ನಿಲ್ಲದ ತಂತ್ರಗಾರಿಕೆ ರೂಪಿಸಿಕೊಂಡಿದೆ. ಗೆದ್ದೇ ಗೆಲ್ಲುವೆ ಎನ್ನುವೆ ಎಂಬ ಉತ್ಸಾಹ ಕೂಡ ಜಗದೀಶ್ ಶೆಟ್ಟರ್ ಅವರಲ್ಲಿದೆ. ಹಾಗಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಗೆಲುವಿನ ಮಾಲೆ ಯಾರಿಗೆ ಎನ್ನುವ ಚರ್ಚೆ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಲೇ ಇದೆ.
ಎರಡು ಭಾಗವಾದ ಸೆಂಟ್ರಲ್ ಕ್ಷೇತ್ರ:ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದಕ್ಷೇತ್ರ ಎರಡು ಭಾಗವಾದಂತೆ ಕಾಣುತ್ತಿದೆ. ಒಂದು ಭಾಗ ಭಾರತೀಯ ಜನತಾ ಪಕ್ಷದ ತತ್ವ, ಸಿದ್ಧಾಂತ ನಂಬಿದ ಜನರು. ಬಿಜೆಪಿ ಜಗದೀಶ್ ಶೆಟ್ಟರ್‌ಗೆ ಎಷ್ಟು ಅವಕಾಶ ನೀಡಿದೆ. ಶಾಸಕರಾಗಿ, ಸಚಿವರಾಗಿ, ಪ್ರತಿ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ, ಮತ್ತೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಲು ಅವಕಾಶ ನೀಡಿತ್ತು. ಆದರೆ, ಕೇವಲ ಟಿಕೆಟ್ ವಿಚಾರ ಮುಂದಿಟ್ಟುಕೊಂಡು, ರಾಷ್ಟ್ರ ನಾಯಕರು ಮನೆಗೆ ಬಂದರೂ ಅವರ ಮಾತನ್ನು ಧಿಕ್ಕರಿಸಿ ಕಾಂಗ್ರೆಸ್ ಸೇರಿದರಲ್ಲ ಎಂಬುದು ಆ ಗುಂಪಿನ ಬೇಸರಕ್ಕೆ ಕಾರಣವಾಗಿದೆ.
ಮತ್ತೊಂದು ಗುಂಪು ಅವರು ಯಾವುದೇ ಪಕ್ಷದಲ್ಲಿ ಇರಲಿ, ಅವರ ಸರಳತೆ ಸದಾ ಜನರ ಕೈಗೆ ಸಿಗುವ ರೀತಿ, ಮಾಡಿರುವ ಕೆಲಸ ನಂಬಿ ಅವರನ್ನು ಬೆಂಬಲಿಸುವುದು. ಅಲ್ಲದೇ ಶೆಟ್ಟರ್ ಅಂತಹ ಹಿರಿಯ ನಾಯಕರಿಗೆ ಬಿಜೆಪಿ ನಾಯಕರು ಟಿಕೆಟ್ ಕೊಡದೇ ಇಂತಹ ಅನ್ಯಾಯ ಮಾಡಿದರಲ್ಲ ಎಂದು ಅನುಕಂಪ ಹೊಂದಿರುವ ಗುಂಪು. ಆರು ಬಾರಿ ಶಾಸಕರಾಗಿರುವ ಜಗದೀಶ್ ಶೆಟ್ಟರ್ ಅವರಿಗೆ ಕ್ಷೇತ್ರದ ಮೇಲೆ ಹಿಡಿತ ಹೆಚ್ಚಿದೆ. ಹಿರಿಯ ರಾಜಕಾರಣಿಗೆ ಅನ್ಯಾಯ ಎನ್ನುವ ಟ್ರಂಪ್ ಕಾರ್ಡ್. ಕಾಂಕ್ರಿಟ್ ರಸ್ತೆ, ಒಳ ಚರಂಡಿ ಸೇರಿದಂತೆ ಇತರೆ ಅಭಿವೃದ್ಧಿ ಯೋಜನಡಗಳು ಅವರನ್ನು ಕೈ ಹಿಡಿಯಬಹುದು. ಆದರೆ, ಪ್ರತಿಸ್ಪರ್ಧಿ, ಶಿಷ್ಯ ಮಹೇಶ್ ಟೆಂಗಿನಕಾಯಿಗೆ ಬಿಜೆಪಿಯ ಹೈಕಮಾಂಡ್ ಕೃಪಾಕಟಾಕ್ಷವಿದೆ. ಅಲ್ಲದೇ ಕಟ್ಟಾ ಬಿಜೆಪಿ ಬಂಬಲಿಗರಿಗೆ ಶೆಟ್ಟರ್ ನಡೆಯಿಂದ ಬೆಸರ ಇವರಿಗೆ ವರದಾನವಾಗಬಹುದು.