ಹುಬ್ಬಳ್ಳಿ : ರಾಜ್ಯದೆಲ್ಲೆಡೆ ತರಕಾರಿ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಟೊಮೆಟೋ ಸೇರಿದಂತೆ ಹಲವು ತರಕಾರಿಗಳ ಬೆಲೆ ಗಗನಕ್ಕೇರಿದ್ದು ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ. ಕಳೆದ ಕೆಲವು ದಿನಗಳಿಂದ ನೂರರ ಗಡಿ ದಾಟಿರುವ ಟೊಮೆಟೋ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ತರಕಾರಿ ಇಳುವರಿ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಮಾರುಕಟ್ಟೆಗೆ ತರಕಾರಿಗಳ ಪೂರೈಕೆ ಕಡಿಮೆಯಾಗಿದೆ. ಇದು ತರಕಾರಿಗಳ ಬೆಲೆ ಏರಿಕೆಗೆ ಕಾರಣವಾಗಿದೆ.
ಜಿಲ್ಲೆಯಲ್ಲೂ ತರಕಾರಿ ಬೆಲೆ ಏರಿಕೆ ಕಂಡಿದ್ದು, ಗ್ರಾಹಕರು ತರಕಾರಿ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೆ ಟೊಮೆಟೊ ಬೆಲೆ 20 ರಿಂದ 30 ರೂ. ಇತ್ತು. ಇದೀಗ 100ರಿಂದ 120 ರೂಪಾಯಿಯ ಗಡಿ ದಾಟಿದೆ. ಮೆಣಸಿನಕಾಯಿ 40 ರಿಂದ 50 ಇತ್ತು. ಈಗ 100 ರೂಪಾಯಿ ಆಗಿದೆ. ದೊಣ್ಣೆಮೆಣಸು 80 ರಿಂದ 90, ಬದನೆಕಾಯಿ 80 ರಿಂದ 100, ಬೆಂಡೆಕಾಯಿ 50ರಿಂದ 60, ಹಿರೇಕಾಯಿ 60 ರಿಂದ 70, ಸೌತೆಕಾಯಿ 60ರಿಂದ 70, ಚವಳೇಕಾಯಿ 50 ರಿಂದ 60, ಹಾಗಲಕಾಯಿ 50 ರಿಂದ 60, ಕ್ಯಾರೆಟ್ 50 ರಿಂದ 60, ಹಾಗಲಕಾಯಿ 50 ರಿಂದ 60 ಹೀಗೆ ಎಲ್ಲಾ ತರಕಾರಿಗಳ ಬೆಲೆಯಲ್ಲಿ ಏರಿಕೆ ಕಂಡಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯ ಜನತಾ ಬಜಾರ್, ದುರ್ಗದಬೈಲ್, ಹಳೇ ಹುಬ್ಬಳ್ಳಿಯ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ವ್ಯಾಪಾರ ಕುಸಿತ ಕಂಡಿದೆ. ಇದರಿಂದಾಗಿ ತರಕಾರಿ ವ್ಯಾಪಾರಸ್ಥರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಸೊಪ್ಪಿನ ಬೆಲೆಯಲ್ಲೂ ಏರಿಕೆ : ತರಕಾರಿಗಳ ಬೆಲೆ ಏರಿಕೆಯ ಮಧ್ಯೆ ಸೊಪ್ಪುಗಳ ಬೆಲೆಯಲ್ಲೂ ಏರಿಕೆ ಕಂಡಿದೆ. ಕರಿಬೇವು 1 ಕೆಜಿ ಬೆಲೆ ಇದೀಗ 100 ರಿಂದ 110 ತಲುಪಿದೆ. 100 ಕಟ್ಟು ಕೊತಂಬರಿಗೆ 800 ರಿಂದ 1000 ಗಡಿ ತಲುಪಿದೆ. ಮೆಂತೆ 800 ರಿಂದ 1000 ಆಗಿದ್ದು, ಪುದೀನಾ 500 ರಿಂದ 600 ರೂಪಾಯಿಗೆ ತಲುಪಿದೆ. ಮೂಲಂಗಿ 500 ರೂ. ಪಾಲಕ್ ಕೂಡಾ 500 ರೂಪಾಯಿ ಆಗಿದೆ.