ಹುಬ್ಬಳ್ಳಿ:ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜನರಿಗೆ ಪರಿಹಾರ ದೊರಕಲಿಲ್ಲ. ಪ್ರಧಾನಿಯೂ ಬರಲಿಲ್ಲ. ಕೇಂದ್ರದ ಮಂತ್ರಿಗಳು ಬಂದರೂ ಕೇಂದ್ರ ಸರ್ಕಾರದಿಂದ ಒಂದು ನಯಾಪೈಸೆಯೂ ಬಿಡುಗಡೆಯಾಗಲಿಲ್ಲ. ಕೂಡಲೇ ರಾಜ್ಯಕ್ಕೆ ಕೇಂದ್ರ 50 ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಗರದ ಚೆನ್ನಮ್ಮ ವೃತ್ತದಲ್ಲಿ ಉರುಳು ಸೇವೆ ಮಾಡುವ ಮೂಲಕ ವಿನೂತವಾಗಿ ಪ್ರತಿಭಟಿಸಿದರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ, ಪ್ರಧಾನಿ ನರೇಂದ್ರ ಮೋದಿ ಅಮೆರಿಕಾದಲ್ಲಿ ಹೌಡಿ ಮಸ್ತಿಯಲ್ಲಿದ್ದಾರೆ. ಆದರೆ, ರಾಜ್ಯದಲ್ಲಿ ನೆರೆ ಸಂತ್ರಸ್ತರು ಪರದಾಟ ನಡೆಸುತ್ತಿದ್ದಾರೆ. ಆ ಬಗ್ಗೆ ಪ್ರಧಾನಿಗಳಿಗೆ ಗೊತ್ತಿಲ್ಲ. ಕರ್ನಾಟಕ ರಾಜ್ಯದ ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ 50 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಈವರೆಗೆ ಕೇಂದ್ರ ಪರಿಹಾರ ಒದಗಿಸಿಲ್ಲ. ಅಲ್ಲದೇ ಮಂತ್ರಿಮಂಡಲದಲ್ಲಿ ಸುಳ್ಳು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಹರಿಹಾಯ್ದರು.