ಹುಬ್ಬಳ್ಳಿ:ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲೂ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗುವುದು ಮುಂದುವರಿದಿದೆ. ಈ ನಡುವೆ ಜಲಮಂಡಳಿಯಲ್ಲಿ ಹಂಗಾಮಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಹೊಸ ವ್ಯವಸ್ಥೆಗೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿ ಕಾನೂನು ಸಮರ ನಡೆಸಲು ಪಾಲಿಕೆ ಮುಂದಾಗಿದೆ.
ಅವಳಿನಗರದಲ್ಲಿ ನೀರು ಪೂರೈಕೆ ವ್ಯವಸ್ಥೆಯನ್ನು ಎಲ್ ಆ್ಯಂಡ್ಟಿ ಸಂಸ್ಥೆಗೆ ಹಸ್ತಾಂತರ ಮಾಡಲಾಗಿದೆ. ಇಲ್ಲಿ ವರದಿ ಮಾಡಿಕೊಳ್ಳುವಂತೆ ಜಲಮಂಡಳಿಯ ಹಂಗಾಮಿ ನೌಕರರಿಗೆ ನಿರ್ದೇಶನ ನೀಡಲಾಗಿದೆ. ಆದರೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಹಾಗೂ ಪಾಲಿಕೆಯ ಮೂಲಕವೇ ಹಸ್ತಾಂತರ ಪ್ರಕ್ರಿಯೆ ನಡೆಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ನೌಕರರು ಪಟ್ಟು ಹಿಡಿದಿದ್ದಾರೆ.
ಪಾಲಿಕೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಮುಖ್ಯ ಕಾರ್ಯದರ್ಶಿ ಹಂತದಲ್ಲಿ ಈ ಕುರಿತು ಹಲವು ಸಭೆ ನಡೆದರೂ ಸಮಸ್ಯೆ ತಾರ್ಕಿಕ ಅಂತ್ಯ ಕಂಡಿಲ್ಲ. ಈ ಸಮಸ್ಯೆ ಬಗೆಹರಿಯದಿರುವುದರಿಂದ ನಗರದಲ್ಲಿ 24x7 ನೀರು ಪೂರೈಕೆ ಯೋಜನೆಗೆ ಹಿನ್ನಡೆ ಆಗುತ್ತಿದೆ. ಎಲ್ ಅಂಡ್ ಟಿಯಲ್ಲಿ ಜಲಮಂಡಳಿಯ ಹಂಗಾಮಿ ನೌಕರರಿಗೆ ಬದಲಾಗಿ ಬೇರೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಲು ಪಾಲಿಕೆಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಭದ್ರಾ ಡ್ಯಾಂ ಬಳಿ ತಡೆಗೋಡೆ ಕುಸಿತ: ಅಪಾಯದ ಭೀತಿ - ಕಣ್ಮುಚ್ಚಿ ಕುಳಿತ ಆಡಳಿತ
ಕೋರ್ಟ್ ನಿರ್ದೇಶನದಂತೆ ಎಲ್ ಅಂಡ್ ಟಿಯಲ್ಲಿ ವರದಿ ಮಾಡಿಕೊಳ್ಳಿ. ಮುಂದೆ ನೀವು ಕಾನೂನು ಹೋರಾಟ ಮಾಡಿ ಎಂದು ನೌಕರರಿಗೆ ಹೇಳಿದರೂ ಅವರು ಸ್ಪಂದಿಸುತ್ತಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ.