ಹುಬ್ಬಳ್ಳಿ:ವಿಧಾನಸಭಾ ಉಪಚುನಾವಣೆಗೆ ಕನಿಷ್ಠ 7 ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕ ರೈತ ಸಂಘದಿಂದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ಹೇಳಿದರು.
ಈ ಬಗ್ಗೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಿದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಅಲ್ಲದೆ ಈ ಭಾಗದಿಂದ ಶಾಸಕರು, ಸಚಿವರು, ಕೇಂದ್ರ ಸಚಿವರು, ಸಂಸದರು, ಮುಖ್ಯಮಂತ್ರಿಗಳಾಗಿದ್ದವರು ಉತ್ತರ ಕರ್ನಾಟಕವನ್ನು ಅತ್ಯಂತ ಹೀನಾಯ ಸ್ಥಿತಿಗೆ ತಂದಿದ್ದಾರೆ. ಪರಿಣಾಮ ಶೈಕ್ಷಣಿಕ, ವೈದ್ಯಕೀಯ, ಕೈಗಾರಿಕೆ, ನೀರಾವರಿ ಕ್ಷೇತ್ರ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ಈ ಭಾಗ ವಂಚಿತವಾಗಿದೆ. ಹೀಗಾಗಿ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿ, ಜೋಳಿಗೆ ಹಾಕಿಕೊಂಡು "ಒಂದು ನೋಟು, ಒಂದು ವೋಟು, ಒಂದು ರೋಟಿ" ನೀಡುವಂತೆ ಮತಯಾಚನೆ ಮಾಡಲಾಗುವುದು ಎಂದರು.