ಹುಬ್ಬಳ್ಳಿ: ಪ್ರಯಾಣಿಕ ಸ್ನೇಹಿಯಾಗಿರುವ ರಾಜ್ಯ ಸಾರಿಗೆ ಸಂಸ್ಥೆ ಈಗ ಮತ್ತೊಂದು ಹೆಜ್ಜೆ ಮೂಲಕ ಜನರಿಗೆ ಹತ್ತಿರವಾಗಿದೆ. ರಾಜ್ಯದ ಸಾರ್ವಜನಿಕ ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿಯೇ ಇದೇ ಮೊದಲ ಬಾರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಅಳವಡಿಸಲಾದ ಯುಪಿಐ (Unified Payment interface - UPI) ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದಕ್ಕೆ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರಾಯೋಗಿಕವಾಗಿ ಆರಂಭಿಸಲಾದ ಈ ಯುಪಿಐ ವಹಿವಾಟುಗಳ ಮೊತ್ತ ಒಂದೂವರೆ ಕೋಟಿ ರೂಪಾಯಿ ದಾಟಿದೆ. ಈ ತಿಂಗಳಲ್ಲಿ ಸಂಸ್ಥೆಯ ಎಲ್ಲಾ ಬಸ್ಸುಗಳಿಗೂ ಯುಪಿಐ ಪಾವತಿ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್ ತಿಳಿಸಿದ್ದಾರೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಬಸ್ಸುಗಳಲ್ಲಿ ಟಿಕೆಟ್ ಪಡೆಯಲು ಯುಪಿಐ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಳೆದ ಸೆಪ್ಟೆಂಬರ್ 1ರಂದು ಹುಬ್ಬಳ್ಳಿ ಗ್ರಾಮಾಂತರದ 3ನೇ ಘಟಕದ ಬಸ್ಸುಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಈ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಿರ್ವಾಹಕರಿಗೆ ಪ್ರತ್ಯೇಕ ಸ್ಟ್ಯಾಟಿಕ್ ಕ್ಯೂ ಆರ್ ಕೋಡ್ ನೀಡಲಾಗಿತ್ತು. ಈ ಮೂಲಕ ಪ್ರಯಾಣಿಕರು ಫೋನ್ ಪೇ, ಗೂಗಲ್ ಪೇ ಮತ್ತಿತರ ಯಾವುದೇ ಯುಪಿಐ ಅಪ್ಲಿಕೇಷನ್ ಮುಖಾಂತರ ಟಿಕೆಟ್ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿತ್ತು.