ಹುಬ್ಬಳ್ಳಿ:ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗಾಂಧಿ ಕುಟುಂಬದ ಮೇಲೆ ಆರೋಪ ಬರಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಘಮಂಡಿ ಘಟಬಂಧನ್ ನಾಯಕರನ್ನಾಗಿ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಇಂಡಿಯಾ ಒಕ್ಕೂಟಕ್ಕೆ ಅಸ್ತಿತ್ವವೇ ಇಲ್ಲ. ಕೇವಲ ಫೋಟೋಕ್ಕೆ ಸೀಮಿತವಾಗಿದ್ದು, ತೋರಿಕೆಯ ಘಟಬಂಧನ್ ಆಗಿದೆ" ಎಂದು ಟೀಕಿಸಿದರು.
ಕಾಂಗ್ರೆಸ್ ಢಮಾರ್ ಆಗೋದು ಗ್ಯಾರಂಟಿ:ಮಹಾರಾಷ್ಟ್ರ, ಉತ್ತರ ಪ್ರದೇಶ, ಕೇರಳದಲ್ಲಿ ಜಗಳ ಆಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಕ್ಕೂಟದಿಂದ ಹೊರಬರುವ ವಿಚಾರ ಮಾಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಅಸಹಾಯಕ ಸ್ಥಿತಿಗೆ ಬಂದಿದೆ. ನಟ ಜಗ್ಗೇಶ್ ಭಾಷೆಯಲ್ಲಿ ಹೇಳುವುದಾದರೆ, ಕಾಂಗ್ರೆಸ್ ಢಮಾರ್ ಆಗೋದು ಗ್ಯಾರಂಟಿ. ಅದಕ್ಕಾಗಿಯೇ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ನಾಯಕರನ್ನಾಗಿ ಮಾಡಿ ಬಲಿಪಶು ಮಾಡಲು ಮುಂದಾಗಿದ್ದಾರೆ" ಎಂದು ಟೀಕಿಸಿದರು.
ಅತ್ಯಾಚಾರದ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಬೇಕು:ಹಾವೇರಿಯ ಹಾನಗಲ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, "ತನಿಖೆಯಲ್ಲಿ ಸರ್ಕಾರದ ವೈಫಲ್ಯ ಮತ್ತು ತುಷ್ಟೀಕರಣ ರಾಜಕಾರಣ ಎದ್ದು ಕಾಣುತ್ತಿದೆ. ಸಂತ್ರಸ್ತೆಯೇ ದೂರು ನೀಡಿದಾಗಲೂ ಗೃಹ ಸಚಿವರು ನೈತಿಕ ಪೊಲೀಸ್ ಗಿರಿಯಾಗಿದೆ, ನಾವು ನೋಡುತ್ತೇವೆ ಎಂದು ಹೇಳಿಕೆ ನೀಡುತ್ತಾರೆ. ರಾತ್ರೋರಾತ್ರಿ ಸಂತ್ರಸ್ತೆಯನ್ನು ಸ್ಥಳಾಂತರಿಸಿ, ಪರಿಹಾರ ನೀಡುತ್ತಾರೆ. ಈ ಎಲ್ಲ ವಿದ್ಯಮಾನ ಗಮನಿಸಿದರೆ ಸರ್ಕಾರ ಯಾರನ್ನೋ ರಕ್ಷಿಸಲು ಯತ್ನಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ವಿಶೇಷ ತನಿಖಾ ತಂಡ ರಚನೆ ಮಾಡಿ, ದಕ್ಷ ಪೊಲೀಸ್ ಅಧಿಕಾರಿ ನೇಮಕ ಮಾಡಬೇಕು" ಎಂದು ಆಗ್ರಹಿಸಿದರು.