ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಬಿಡಿಎ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶುದ್ದಹಸ್ತರಾಗಿ ಬರುತ್ತಾರೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಪ್ರಸ್ತುತ ಯಾವುದೇ ಸಂವಿಧಾನಾತ್ಮಕ ಹುದ್ದೆಯಲ್ಲಿಲ್ಲ. ಭಾರತದ ಕಾನೂನು ವ್ಯವಸ್ಥೆ ಅಡಿ ತನಿಖೆ ನಡೆಯಲಿ. ನಮಗೆ ಕಾನೂನಿನ ಮೇಲೆ ವಿಶ್ವಾಸ ಇದೆ. ಆದರೆ, ಯಡಿಯೂರಪ್ಪ ಬಗ್ಗೆ ಶಾಸಕ ಬಸವರಾಜ ಯತ್ನಾಳ್ ಏನು ಹೇಳಿಕೆ ಕೊಟ್ಟಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನನಗಿಲ್ಲ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾತನಾಡಿದರು ರಾಜಕೀಯ ಜೀವನದಲ್ಲಿ ಯಾರೇ ಆಗಲಿ ಅಸಭ್ಯ ವರ್ತನೆ ಸಲ್ಲದು. ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡುವುದು ಒಳಿತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜೋಶಿ ಟಾಂಗ್ ಕೊಟ್ಟರು.
ಬಿಜೆಪಿಗರು ಸಿದ್ದರಾಮಯ್ಯ ಕಚ್ಚಿ ಹರಕ ಎಂದು ಟೀಕಿಸುತ್ತಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡು ಮಾತನಾಡಿದ ಜೋಶಿ, ಸಿದ್ದರಾಮಯ್ಯ ಕೂಡಾ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಬಗ್ಗೆ ಯಾವ ಆಧಾರದ ಮೇಲೆ ಲೂಟಿ ರವಿ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇದರಲ್ಲಿ ಇಬ್ಬರದ್ದೂ ತಪ್ಪಿದೆ. ಹಾಗಾಗಿ ರಾಜಕೀಯದಲ್ಲಿ ಅಸಭ್ಯ ವರ್ತನೆ ಸಲ್ಲದು ಎಂದರು.
ಸೇವಾ ಪಾಕ್ಷಿಕ ಕಾರ್ಯಕ್ರಮ:ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ನಮೋ ಅವರ ಜೀವನವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ಸೇವಾ ಪಾಕ್ಷಿಕ ಕಾರ್ಯಕ್ರಮಕ್ಕೆ ಕರೆ ಕೊಟ್ಟಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ಸಪ್ಟೆಂಬರ್ 17 ಮತ್ತು 18 ರಂದು ಅತಿದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಗಿನ್ನಿಸ್ ರೆಕಾರ್ಡ್ ನಿರ್ಮಾಣದ ಗುರಿ: ಸೆಪ್ಟೆಂಬರ್ 18 ರಂದು ಜಿಲ್ಲೆಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ಅಂದು ನುರಿತ ತಜ್ಞ ವೈದ್ಯರುಗಳಿಂದ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ತಪಾಸಣೆ ಜರುಗಲಿದೆ. ಅಲ್ಲದೇ ಜಿಲ್ಲೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಧಾರವಾಡ ಜಿಲ್ಲೆಯಲ್ಲಿ ಗಿನ್ನಿಸ್ ರೆಕಾರ್ಡ್ ನಿರ್ಮಾಣದ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರದಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಮೇಯರ್ ಈರೇಶ ಅಂಚಟಗೇರಿ, ಬಸವರಾಜ ಕುಂದಗೋಳಮಠ, ಡಾ. ಕ್ರಾಂತಿಕಿರಣ, ಮಹೇಶ ನಾಲವಾಡ, ಸಂಜಯ ಕಟಪಕರ, ಜಯತೀರ್ಥ ಕಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಓದಿ: ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ: ಉದ್ಯಮಿ, ಪ್ರಭಾವಿ ರಾಜಕಾರಣಿಗಳ ಪುತ್ರರು ಭಾಗಿ ಆರೋಪ