ಮಹದಾಯಿ ಹೋರಾಟಗಾರ ಹಾಗೂ ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊರಬದಮಠ ಮಾತನಾಡಿದರು. ಹುಬ್ಬಳ್ಳಿ:''ಮಹದಾಯಿ ಹೋರಾಟ ಏಳು ವರ್ಷ ಪೂರೈಸಿ ಎಂಟು ವರ್ಷಕ್ಕೆ ಕಾಲಿಟ್ಟಿದೆ. ಆದರೂ ಮಹದಾಯಿ ಕನಸು ಕನಸಾಗಿಯೇ ಉಳಿದಿದೆ. ಈ ವಿಳಂಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರೇ ಕಾರಣ'' ಎಂದು ಮಹದಾಯಿ ಹೋರಾಟಗಾರ ಹಾಗೂ ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊರಬದಮಠ ಆರೋಪಿಸಿದರು.
ನಗರದಲ್ಲಿ ಶನಿವಾರ ನಡೆದ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಪ್ರತಿಯೊಂದು ಸರ್ಕಾರವೂ ಕೂಡ ಹಾರಿಕೆ ಉತ್ತರ ನೀಡುವ ಮೂಲಕ ತಮ್ಮ ರಾಜಕೀಯ ಬೆಳೆಯನ್ನು ಬೇಯಿಸಿಕೊಳ್ಳುವ ಕೆಲಸವನ್ನು ಮಾಡುತ್ತಿವೆ. ಈ ಭಾಗದ ಬಹು ನಿರೀಕ್ಷಿತ ಯೋಜನೆ ಕಳಸಾ- ಬಂಡೂರಿ, ಮಹದಾಯಿ ಯೋಜನೆ ವಿಳಂಬವಾಗಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರೇ ನೇರವಾದ ಹೊಣೆಗಾರರಾಗಿದ್ದಾರೆ'' ಎಂದರು.
''ಇನ್ನೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಭರವಸೆ ಕೊಟ್ಟಿದ್ದರು. ಆದರೆ, ಯಾವುದೇ ರೀತಿಯಲ್ಲಿ ಭರವಸೆ ಈಡೇರಿಸದೇ ನೆಪ ಮಾತ್ರಕ್ಕೆ ಮಹದಾಯಿ ಬಗ್ಗೆ ಚಿಂತನೆ ನಡೆಸಿ ಕೈತೊಳೆದುಕೊಂಡಿರುವುದು ವಿಪರ್ಯಾಸದ ಸಂಗತಿಯಾಗಿದೆ'' ಎಂದು ಕಿಡಿಕಾರಿದರು. ಇನ್ನು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಮಹದಾಯಿ ಬಗ್ಗೆ ಇನ್ನೂ ಕೆಲವು ದಿನಗಳಲ್ಲಿ ಕಿರು ಹೊತ್ತಿಗೆ ಬಿಡುಗಡೆ ಮಾಡಲಾಗುತ್ತದೆ'' ಎಂದು ತಿಳಿಸಿದರು.
ರೈತಪರ ಯೋಜನೆಗಳ ಜಾರಿಗೆ ಸಹಕರಿಸದ ಪ್ರಹ್ಲಾದ್ ಜೋಶಿ:''ನ್ಯಾಯಾಧೀಕರಣದಲ್ಲಿ ರಾಜ್ಯದ ಪರ ವಾದ ಮಂಡಿಸುತ್ತಿರುವ ನ್ಯಾಯವಾದಿ ಮೋಹನ ಕಾತರಕಿ ಅವರ ತಂಡ ತೀವ್ರಗತಿಯಲ್ಲಿ ನ್ಯಾಯಕೊಡಿಸುವಲ್ಲಿ ವಿಫಲವಾಗಿದೆ. ಕೂಡಲೇ ಅವರನ್ನು ಕೈಬಿಡಬೇಕು. ಮಹದಾಯಿ ಪರ ಪಾದಯಾತ್ರೆ ಮಾಡಿದ್ದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗಲೂ ರಾಜ್ಯಕ್ಕೆ ನ್ಯಾಯ ಒದಗಿಸಲಿಲ್ಲ. ಪ್ರಹ್ಲಾದ್ ಜೋಶಿ ಅವರು ಸಂಸದರಾಗಿ, ಕೇಂದ್ರ ಸಚಿವರಾದರೂ ಮಹದಾಯಿ ನೀರು ತರಲು ವಿಫಲರಾಗಿದ್ದಾರೆ.
ಪ್ರಹ್ಲಾದ್ ಜೋಶಿ ಅವರು ರೈತಪರ ಯೋಜನೆಗಳ ಜಾರಿಗೆ ಸಹಕರಿಸುತ್ತಿಲ್ಲ. ವೀರಶೈವ ಲಿಂಗಾಯತ ಧರ್ಮ ಒಡೆಯುತ್ತಿದ್ದಾರೆ. ಮಠಾಧೀಶರ ಮಧ್ಯೆ ಜಗಳ ಹಚ್ಚುತ್ತಿದ್ದಾರೆ. ಸಿಬಿಐ ದಾಳಿ ಹೆದರಿಕೆಯಿಂದ ಇತರ ರಾಜಕೀಯ ಮುಖಂಡರು ಪ್ರಹ್ಲಾದ್ ಜೋಶಿ ವಿರುದ್ಧ ಕೇಂದ್ರಕ್ಕೆ ದೂರು ಕೊಡಲು ಹೆದರುತ್ತಿದ್ದಾರೆ. ಪಕ್ಷ ಕಟ್ಟಿದವರನ್ನೇ ಜೋಶಿ ಹೊರಹಾಕಿದರು. ಮಹದಾಯಿಗೆ ಸಂಬಂಧಿಸಿದಂತೆ ಕರ್ನಾಟಕದ ವಿರುದ್ಧ ಮಹಾರಾಷ್ಟ್ರ ಮತ್ತು ಗೋವಾ ಮುಖ್ಯಮಂತ್ರಿಗಳು ಜಂಟಿ ಪತ್ರಿಕಾಗೋಷ್ಠಿ ಮಾಡಲು ಜೋಶಿ ಪ್ರಚೋದನೆ ನೀಡುತ್ತಿದ್ದಾರೆ. ರೈತಪರ ಕಳಕಳಿ ತೋರುತ್ತಿಲ್ಲ. ಪ್ರಹ್ಲಾದ್ ಜೋಶಿ ಅವರು ನಡೆದುಬಂದ ದಾರಿ ಎಂಬ ಕಿರುಹೊತ್ತಿಗೆ ಬಿಡುಗಡೆ ಮಾಡಲಿದ್ದೇವೆ. ಮಹದಾಯಿ ವಿಳಂಬಕ್ಕೆ ಜೋಶಿ ಅವರ ವೈಫಲ್ಯದ ವಿವರ ಇರಲಿದೆ. ಲೋಕಸಭಾ ಚುನಾವಣೆ ಮುಂಚೆ ಕಿರುಹೊತ್ತಿಗೆ ಬಿಡುಗಡೆ ಮಾಡಲಾಗುವುದು'' ಎಂದು ಹೇಳಿದರು.
''ಕಳಸಾ ಬಂಡೂರಿ ವಿಳಂಬ, ವೀರಶೈವ ಲಿಂಗಾಯ ಧರ್ಮ ಒಡೆಯಲು ಮಾಡಿದ ಕುತಂತ್ರ, ಮೂರು ಪಕ್ಷಗಳ ಬಗ್ಗೆ ಪ್ರಸ್ತಾಪ ಮತ್ತಿತರ ವಿವರ ಕಿರು ಹೊತ್ತಿಗೆಯಲ್ಲಿ ಇರಲಿದೆ. ಲೋಕಸಭಾ ಚುನಾವಣೆಗೆ ಮುಂಚೆ ಮಹದಾಯಿ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಚುನಾವಣೆ ಮುಂಚೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು'' ಎಂದು ತಿಳಿಸಿದರು.
ಇದನ್ನೂ ಓದಿ:ಬಜೆಟ್ಗೆ ಸೀಮಿತವಾದ ಕಳಸಾ ಬಂಡೂರಿ, ಮಹದಾಯಿ ಯೋಜನೆ: ಹೋರಾಟಗಾರರ ಆಕ್ರೋಶ