ಹುಬ್ಬಳ್ಳಿ: ಬಿಜೆಪಿ - ಜೆಡಿಎಸ್ ಮೈತ್ರಿ ಇನ್ನೂ ಫೈನಲ್ ಆಗಿಲ್ಲ. ಅದರ ಬಗ್ಗೆ ನನಗೆ ಸಂಪೂರ್ಣವಾದ ಮಾಹಿತಿ ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೈತ್ರಿ ಅನಿವಾರ್ಯ ಎಂದು ಸ್ಥಳೀಯವಾಗಿ ಹೇಳಿರಬಹುದು. ನಾನು ಕೇಂದ್ರದಲ್ಲಿ ಮಂತ್ರಿಯಾಗಿ ಮೈತ್ರಿ ವಿಚಾರವಾಗಿ ನಮ್ಮ ಪಕ್ಷದ ವರಿಷ್ಠರು ಹೇಳುವವರೆಗೆ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಖಾಸಗಿ ಬಸ್ ಮಾಲೀಕರ ಸಂಕಷ್ಟದ ಬಗ್ಗೆ ಮಾತನಾಡಿದ ಅವರು, ಖಾಸಗಿ ಬಸ್ ಮಾಲೀಕರ ತೊಂದರೆ ನಿವಾರಿಸುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು. ಶಕ್ತಿ ಯೋಜನೆ ವಿರೋಧಿಸಿ ಖಾಸಗಿ ವಾಹನ ಬಂದ್ ಮಾಡಲಾಗಿದ್ದು, ಖಾಸಗಿ ಬಸ್ನವರಿಗೆ ತೊಂದರೆ ಆಗಿರುವುದು ನಿಜ. ಬಡ ಜನ ಇರುವುದರಿಂದ ಸರ್ಕಾರ ಈ ಬಗ್ಗೆ ಗಮನ ಕೊಡಬೇಕು. ರಾಜ್ಯ ಸಾರಿಗೆ ಕೂಡ ನಷ್ಟದಲ್ಲಿದೆ. ಅದರ ಬಗ್ಗೆಯೂ ಸರ್ಕಾರ ಗಮನ ಕೊಡಬೇಕು. ಉಚಿತ ಕೊಡುತ್ತಿದ್ದೇವೆ ಎಂದು ಮನಬಂದಂತೆ ನಡೆದುಕೊಳುತ್ತಿದ್ದಾರೆ ಇದು ಸರಿ ಅಲ್ಲ ಎಂದು ಹೇಳಿದರು.
ಜಿ-20 ಶೃಂಗಸಭೆ ಅಚ್ಚುಕಟ್ಟಾಗಿ ನಡೆದಿದೆ:ಇನ್ನು ಜಿ20 ಭಾರತದ 75 ವರ್ಷದ ಇತಿಹಾಸದಲ್ಲಿ ಬಾರಿ ದೊಡ್ಡ ಮೈಲಿಗಲ್ಲಾಗಿದ್ದು, ಮುಖ್ಯವಾಗಿ ಭಿನ್ನಾಭಿಪ್ರಾಯ ಬರದಂತೆ ತೀರ್ಮಾನ ಮಾಡಿದ್ದೆ ಬಹುದೊಡ್ಡ ಸಾಧನೆ. ಭಾರತ ನೇತೃತ್ವವನ್ನು ಇತರ ದೇಶ ಒಪ್ಪುತ್ತಿದೆ ಎನ್ನುವುದರ ಸ್ಪಷ್ಟ ಸಂಕೇತವಾಗಿದೆ. ಆಫ್ರಿಕನ್ ಒಕ್ಕೂಟ ಒಗ್ಗೂಡಿಸಲು ಭಾರತದ ಪ್ರಪೋಸಲ್ ಬಂದಾಗ ಇದನ್ನು ಸ್ವೀಕಾರ ಮಾಡಿದ್ದಾರೆ. ಮಧ್ಯಪ್ರಾಚ್ಯ ಹೊಸ ಆರ್ಥಿಕ ಕಾರಿಡಾರ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿವೆ. ಭಾರತದ ಎಲ್ಲಾ ಸಲಹೆಗಳನ್ನು ಮಾನ್ಯ ಮಾಡಿದ್ದಾರೆ. ಎಲ್ಲವೂ ಅಚ್ಚುಕಟ್ಟಾಗಿ ನಡೆದಿದೆ ಎಂದರು.