ಧಾರವಾಡ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಕ್ಕಿ ಆರೋಪ ವಿಚಾರಕ್ಕೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ತನ್ನ ಕೈಯಿಂದ ಅಕ್ಕಿ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸುಳ್ಳು ಹೇಳುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ತಿಂಗಳಾಯ್ತು. ಇನ್ನೂ ಒಂದು ಕೆಜಿ ಅಕ್ಕಿಯನ್ನೂ ಕೊಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಈಗ ಕೊಡುತ್ತಿರುವ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರದ್ದು. ಅದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ನ್ಯಾಷನಲ್ ಫುಡ್ ಸೆಕ್ಯೂರಿಟಿ ಆ್ಯಕ್ಟ್ ಅಡಿ ಕೊಡುತ್ತಿದ್ದೇವೆ. ಈ ಆ್ಯಕ್ಟ್ ಮಾಡಿದ್ದು ನಾವು ಅಂತ ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ಅವರು ಆ್ಯಕ್ಟ್ ಪಾಸ್ ಮಾಡಿದ್ದರೂ ಹಣ ಇಟ್ಟಿರಲಿಲ್ಲ. ಮೋದಿಯವರು ಬಂದ ನಂತರ ಇದನ್ನು ಶುರು ಮಾಡಿದ್ದೇವೆ. 80 ಕೋಟಿ ಜನರಿಗೆ ನಾವು ಉಚಿತವಾಗಿ ಅಕ್ಕಿ ಕೊಡುತ್ತಿದ್ದೇವೆ. ಉಳಿದ 60 ಕೋಟಿ ಜನಸಂಖ್ಯೆಗೆ ಕನಿಷ್ಠ ದರದಲ್ಲಿ ಅಕ್ಕಿ ಕೊಡಬೇಕಾಗುತ್ತದೆ. ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ಹಾಗಾಗಿ ರಾಜ್ಯ ಸರ್ಕಾರ ಎಫ್ಸಿಐದವರು ಅಕ್ಕಿ ಕೊಟ್ಟರೇ ನಾವು ಕೊಡುತ್ತೇವೆ ಅಂತ ಎಲ್ಲೂ ಹೇಳಿಲ್ಲ. ಮೋದಿ ಕೊಡುತ್ತಿರುವ 5 ಕೆಜಿ ಬಿಟ್ಟು, 10 ಕೆಜಿ ಅಕ್ಕಿಯನ್ನು ಅವರು ಕೊಡಬೇಕು" ಎಂದು ಒತ್ತಾಯಿಸಿದರು.
"ಕಾಂಗ್ರೆಸ್ಸಿಗರು ಕೇಂದ್ರ ಸರ್ಕಾರದ ಮೇಲೆ ಕ್ಷುಲ್ಲಕ ಆರೋಪ ಮಾಡುತ್ತಿದ್ದಾರೆ. ಎಲ್ಲಾ ರಾಜ್ಯ ಸರ್ಕಾರಗಳು 10 ಕೆಜಿ ಕೊಡುತ್ತೇವೆ ಎಂದರೆ ಮುಂದೇನು? ಎಲ್ಲರಿಗೂ ಕೇಂದ್ರ ಸರ್ಕಾರ ಅಕ್ಕಿ ಕೊಡಲು ಆಗುತ್ತಾ? ಕೆಲ ರಾಜ್ಯಗಳಲ್ಲಿ ಈಗ ಕೊಡುತ್ತಿದ್ದಾರೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಿಗೂ ಹೆಚ್ಚುವರಿ ಅಕ್ಕಿ ಕೊಟ್ಟಿಲ್ಲ. ಹೆಚ್ಚುವರಿ ಅಕ್ಕಿ ಆಯಾ ರಾಜ್ಯಗಳು ತಮ್ಮ ವ್ಯವಸ್ಥೆಯಲ್ಲಿ ಕೊಡುತ್ತಿವೆ. ಅದರ ಬಗ್ಗೆ ವಿಚಾರ ಮಾಡದೇ ಘೋಷಣೆ ಮಾಡಿದ್ದಾರೆ" ಎಂದು ಗುಡುಗಿದರು.