ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡ: ಬಿಎಸ್‌ವೈ ಆಪ್ತರೆಂದು ರೇಣುಕಾಚಾರ್ಯಗೆ ನೋಟಿಸ್ ಎಂದು ಆರೋಪದ ವಿಚಾರವಾಗಿ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಯಾರನ್ನೆಲ್ಲಾ ಕರೆದಿದ್ದೀವಲ್ಲ, ಅದರ ನೇತೃತ್ವ ಬಿಎಸ್‌ಐ ಅವರೇ ವಹಿಸಿದ್ದರು. ಯಡಿಯೂರಪ್ಪ ಅವರು ರೇಣುಕಾಚಾರ್ಯ ಅವರನ್ನು ಕರೆದು ಮಾತನಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾನು ಸಹ ಇವತ್ತು ರೇಣುಕಾಚಾರ್ಯರನ್ನು ಕರೆದು ಮಾತನಾಡುವೆ. ನಮ್ಮದು ಒಂದು ಪರಿವಾರ ಇದ್ದಂತೆ ಎಂಬ ಮನವರಿಕೆ ಮಾಡುವೆ. ಯಾರೂ ಕೂಡಾ ಬಹಿರಂಗವಾಗಿ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದೆ. ಪಕ್ಷದ ಚೌಕಟ್ಟಿನಲ್ಲಿಯೇ ಮಾತನಾಡುವಂತೆ ಕಟ್ಟುನಿಟ್ಟಿನ ಸೂಚನೆ ಇದೆ. ಒಂದಿಷ್ಟು ಆಕ್ರೋಶದಲ್ಲಿ ಕೆಲವರು ಮಾತನಾಡಿದ್ದರು. ಆದರೆ ಈಗ ಅದು ಸರಿ ಹೋಗಿದೆ ಎಂದು ತಿಳಿಸಿದ್ದಾರೆ.
ಪಕ್ಷದ ಮೇಲೆ ಯಾರಿಗೂ ಅಸಮಾಧಾನ ಇಲ್ಲ. ಪರಸ್ಪರ ಭಿನ್ನಾಭಿಪ್ರಾಯದಿಂದಾಗಿ ಮಾತನಾಡಿದ್ದಾರೆ. ಆದರೆ ಸಾರ್ವಜನಿಕವಾಗಿ ಮಾತನಾಡದಂತೆ ಸೂಚನೆ ಕೊಟ್ಟಿದ್ದೇವೆ. ಪಕ್ಷದ ರಾಜ್ಯಾಧ್ಯಕ್ಷ ಕಟೀಲ್ ಅವರ ಅಧ್ಯಕ್ಷತೆ, ಬಿಎಸ್‌ವೈ ನೇತೃತ್ವದಲ್ಲಿಯೇ ಸಭೆ ಆಗಿದೆ. ಇಲ್ಲಿ ಅವರ ಪರ, ಇವರ ಪರ ಎಂಬ ಪ್ರಶ್ನೆಯೇ ಇಲ್ಲ. ಯಾರೂ ಸಾರ್ವಜನಿಕವಾಗಿ ಹೇಳಿಕೆ ಕೊಡಬಾರದೆಂಬ ನಿಯಮ ತಿಳಿಸಿದ್ದೇವೆ. ಈ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಹೇಳಿದ್ದೇವೆ ಎಂದರು.
ಜನರಿಗೆ 10 ಕೆಜಿ ಅಕ್ಕಿಯ ಹಣ ಕೊಡಬೇಕು :ನಾಳೆಯಿಂದ ಅಧಿವೇಶನ ಆರಂಭ ಹಿನ್ನೆಲೆ ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ಪ್ರತಿಭಟನೆ ಮಾಡಲಿದೆ. ಇವರ ಬೋಗಸ್ ಗ್ಯಾರಂಟಿ ಬಗ್ಗೆ ಹೋರಾಟ ಮಾಡುತ್ತೇವೆ. ನೀವು 10ಕೆಜಿ ಅಕ್ಕಿಯ ಹಣ ಕೊಡಬೇಕು. ಇಲ್ಲವೇ ಕ್ಷಮೆ ಕೇಳಬೇಕು. ನಾವು 5 ಕೆಜಿ ಹಣ ಕೊಡುತ್ತಿದ್ದೇವೆ. ನರೇಂದ್ರ ಮೋದಿಯವರು 5ಕೆಜಿ ಅಕ್ಕಿ ಕೊಡುತ್ತಿದ್ದಾರೆ ಎಂಬ ಸತ್ಯ ಹೇಳಬೇಕು. ಈ ಸತ್ಯವನ್ನು ಹೇಳಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಜನರಿಗೆ 10 ಕೆಜಿ ಅಕ್ಕಿಯ ಹಣ ಕೊಡಬೇಕು ಎಂದು ಜೋಶಿ ಆಗ್ರಹಿಸಿದರು.
ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಬಲಪಡಿಸಬೇಕು:ವಿರೋಧ ಪಕ್ಷದ ನಾಯಕ ಸ್ಥಾನ ಉತ್ತರ ಕರ್ನಾಟಕಕ್ಕೆ ಸಿಗುತ್ತಾ? ಎಂಬ ವಿಚಾರದ ಕುರಿತು ಮಾತನಾಡಿದ ಅವರು, ಯಾರಿಗೆ ಸಿಗುತ್ತೆ ನೋಡೋಣ. ಧಾರವಾಡ-ಬೆಂಗಳೂರು ವಂದೇ ಭಾರತ ರೈಲಿಗೆ ಕಲ್ಲೆಸದ ಪ್ರಕರಣ ಇದೊಂದು ವಿಕೃತ ಮನೋಭಾವ. ದೇಶದ ಅನೇಕ ಭಾಗದಲ್ಲಿ ಈ ರೀತಿ ಆಗುತ್ತಿದೆ. ಇದು ಒಳ್ಳೆಯದಲ್ಲ. ವಂದೇ ಭಾರತ ರೈಲು ದೇಶದ ಆಸ್ತಿ. ದೇಶದಲ್ಲಿ ಆಧುನಿಕ ಸೌಲಭ್ಯ ಬೆಳೆಯಲು ಈ ರೈಲು ಕಾರಣ ಆಗಿದೆ. ಭಾರತದಲ್ಲಿ ತಯಾರಾಗಬೇಕೆಂಬ ಕಾಳಜಿಯಿಂದ ಪ್ರಧಾನಿ ಅವರು ಈ ರೈಲುಗಳಿಗೆ ಚಾಲನೆ ಕೊಟ್ಟಿದ್ದಾರೆ. ರಸ್ತೆ ಪಕ್ಕಕ್ಕೆ ನಿಂತು ಕಲ್ಲು ಎಸೆಯುತ್ತಿದ್ದಾರೆ. ಹೀಗಾಗಿ ರೈಲಿನ ಒಳಗೆ ಇದ್ದವರಿಗೆ ಅವರು ಯಾರು ಅಂತಾ ಗೊತ್ತಾಗುವುದಿಲ್ಲ. ಹೀಗಾಗಿ ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಬೇಕು. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಬಲಪಡಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:9 ಮಂದಿ ವಿರುದ್ಧ ಎನ್ಐಎ ಚಾರ್ಜ್ಶೀಟ್ ಸಲ್ಲಿಕೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು?