ಧಾರವಾಡ:ಜುಲೈ 26 ಕ್ಕೆ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಯಾರಿಗೆ ಯಾರು ಡೆಡ್‌ಲೈನ್ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ಯಡಿಯೂರಪ್ಪ ಹೇಳಿಕೆ ಮಾಧ್ಯಮದಲ್ಲಿ ಮಾತ್ರ ಕೇಳಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ನಾಯಕರ ಜೊತೆ ಮಾತುಕತೆ ಆಗಿದೆ ಅಂತ ಹೇಳಿದ್ದಾರೆ. ಏನು ಮಾತುಕತೆ ಆಗಿದೆ ಇವರಿಗೆ ಅವರೇನು ಹೇಳಿದ್ದಾರೆ ಯಾವುದೂ ಗೊತ್ತಿಲ್ಲ. ನನ್ನ ಹೆಸರು ಹಾಗೂ ಮತ್ತೊಬ್ಬರ ಹೆಸರು ಕೇಳಿ ಬರುತ್ತಿದೆ. ಇದೆಲ್ಲವೂ ಮಾಧ್ಯಮದಲ್ಲಿ ಬರುತ್ತಿರೋದು. ಈ ಬಗ್ಗೆ ಯಾರೂ ನನ್ನ ಜೊತೆ ಚರ್ಚೆ ಮಾಡಿಲ್ಲ, ಆ ಚರ್ಚೆಯಲ್ಲಿ ಸಹ ನಾನು ಇಲ್ಲ ಎಂದು ಸ್ಪಷ್ಟಪಡಿಸಿದರು.