ಹುಬ್ಬಳ್ಳಿಗೆ ಅಮಿತ್ ಶಾ ಆಗಮನ ಹುಬ್ಬಳ್ಳಿ/ಧಾರವಾಡ/ಬೆಳಗಾವಿ:ವಿಶೇಷ ವಿಮಾನದ ಮೂಲಕ ದೆಹಲಿಯಿಂದ ವಾಣಿಜ್ಯನಗರಿ ಹುಬ್ಬಳ್ಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದರು. ತಡರಾತ್ರಿ ನಗರಕ್ಕೆ ಆಗಮಿಸಿದ ಅಮಿತ್ ಶಾ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ವಾಗತ ಕೋರಿದರು.
ಇಲ್ಲಿನ ಡೆನಿಸನ್ ಹೋಟೆಲ್ನಲ್ಲಿ ಅಮಿತ್ ಶಾ ಅವರು ವಾಸ್ತವ್ಯ ಹೂಡಿದ್ದು ಹುಬ್ಬಳ್ಳಿ, ಧಾರವಾಡ, ಕುಂದಗೋಳ ಮತ್ತು ಬೆಳಗಾವಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಿ ಮೋದಿ ಅವರ ಇತ್ತೀಚಿನ ರಾಜ್ಯ ಪ್ರವಾಸದ ಬೆನ್ನಲ್ಲೇ ಅಮಿತ್ ಶಾ ಆಗಮನ ರಾಜ್ಯ ಬಿಜೆಪಿಗೆ ಬೂಸ್ಟರ್ ಡೋಸ್ ನೀಡಿದಂತಾಗುತ್ತಿದೆ.
ಸಿಎಂ ಪ್ರತಿಕ್ರಿಯೆ: ನೆಚ್ಚಿನ ನಾಯಕ ಅಮಿತ್ ಶಾ ಇಂದು ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಪ್ರವಾಸ ಕೈಗೊಳ್ಳಲಿದ್ದಾರೆ. ಅಧಿಕೃತ ಕಾರ್ಯಕ್ರಮಗಳಾದ ಎಫ್‌ಎಸ್‌ಎಲ್ ಲ್ಯಾಬ್ ಅಡಿಗಲ್ಲು, ಬಿವಿಬಿ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹುಬ್ಬಳ್ಳಿಯ ಅಶೋಕ ನಗರದ ತಮ್ಮ ನಿವಾಸದ ಬಳಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಕುಂದಗೋಳದಲ್ಲಿ ಬೂತ್ ಮಟ್ಟದ ವಿಜಯಸಂಕಲ್ಪ ಸಮಾವೇಶ, ಎಂಕೆ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಬಳಿಕ ಬೆಳಗಾವಿಯಲ್ಲಿ ಪದಾಧಿಕಾರಿಗಳ ಸಭೆ ನಡೆಯಲಿದೆ ಎಂದರು.
ಕಿತ್ತೂರು ಕರ್ನಾಟಕ ನಮ್ಮ ಭದ್ರ ಕೋಟೆ, ಈ ಕಾರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸಮಗ್ರ ಕರ್ನಾಟಕದಲ್ಲಿ ಅಮಿತ್ ಶಾ ಕಳೆದ ಚುನಾವಣೆಯಲ್ಲಿ ಓಡಾಡಿದ್ದರು. ಮೊನ್ನೆ ಕೂಡ ಮಂಡ್ಯದಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಶಾ ಚಾಲನೆ ನೀಡುತ್ತಿದ್ದಾರೆ. ಜನಪ್ರಿಯತೆ ಅವರಿಗಿದ್ದು, ಈ ಸಲವೂ ರಾಜ್ಯಾದ್ಯಂತ ಓಡಾಡಲಿದ್ದಾರೆ ಎಂದರು.
ಹುಬ್ಬಳ್ಳಿಗೆ ಅಮಿತ್ ಶಾ ಆಗಮನ ಬೆಳಗಾವಿ ಬಿಜೆಪಿಯ ಭಿನ್ನಮತ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ, ನಮ್ಮೆಲ್ಲರಿಗೂ ಪಕ್ಷದ ಬೆಳವಣಿಗೆ ಮುಖ್ಯ. ಎಲ್ಲರೂ ಭಿನ್ನಮತ ಮರೆತು ಪಕ್ಷಕ್ಕಾಗಿ ಶ್ರಮಿಸಬೇಕು. ಎಲ್ಲ ಕಡೆಯೂ ನಮಗೆ ಒಂದೊದ್ದು ಗುರಿ ಇದೆ, ಅದನ್ನು ತಲುಪಲು ಶ್ರಮಿಸಿ ಎಂದು ಮನವಿ ಮಾಡಿದರು.
ಅಮಿತ್ ಶಾ ಕಾರ್ಯಕ್ರಮ ವಿವರ: ಹುಬ್ಬಳ್ಳಿಯಲ್ಲಿ ಇಂದು ಬೆಳಗ್ಗೆ ಕೆಎಲ್ಇ ಕಾರ್ಯಕ್ರಮ ಮತ್ತು ಒಳಾಂಗಣ ಕ್ರೀಡಾಂಗಣ ಉದ್ಘಾಟನೆಯಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಬಳಿಕ ಧಾರವಾಡದಲ್ಲಿ ನೂತನ ವಿಧಿವಿಜ್ಞಾನ ವಿವಿ ಕ್ಯಾಂಪಸ್ಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ನಂತರ ಕುಂದಗೋಳದಲ್ಲಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ. ಆ ಬಳಿಕ ಬೆಳಗಾವಿಗೆ ತೆರಳಿ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಸ್ಥಳ ಬದಲಾವಣೆ: ಅಮಿತ್ ಶಾ ಭಾಗಿಯಾಗಲಿದ್ದಧಾರವಾಡ ಕಾರ್ಯಕ್ರಮದಲ್ಲಿ ದಿಢೀರ್ ಬದಲಾವಣೆಯಾಗಿದೆ. ಕ್ಯಾಂಪಸ್ ಭೂಮಿ ಪೂಜೆ ಬಳಿಕ ವೇದಿಕೆ ಕಾರ್ಯಕ್ರಮ ರೈತ ಜ್ಞಾನಾಭಿವೃದ್ಧಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಮೊದಲು ವೇದಿಕೆ ಕಾರ್ಯಕ್ರಮ ಕೃಷಿ ವಿವಿ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈಗ ಏಕಾಏಕಿ ರೈತ ಜ್ಞಾನಾಭಿವೃದ್ಧಿ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದು, ಅಲ್ಲಿ 1350 ಜನರಿಗೆ ಮಾತ್ರ ಅವಕಾಶ ಸಿಗಲಿದೆ. ಸಿಆರ್ಪಿಎಫ್ ತಂಡ ಸ್ಥಳಕ್ಕಾಗಮಿಸಿ ಭದ್ರತೆ ಪರಿಶೀಲಿಸಿತು.
ಹೆಲಿಪ್ಯಾಡ್ ನಿರ್ಮಾಣ:ಮಧ್ಯಾಹ್ನ 12.30 ರ ಸುಮಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಧಾರವಾಡಕ್ಕೆ ಆಗಮಿಸಲಿದ್ದಾರೆ. ಎತ್ತಿನಗುಡ್ಡದ ಸರ್ಕಾರಿ ಶಾಲಾ ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣಕ್ಕೆ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದ ನಂತರ ಅಮಿತ್ ಶಾ ಅವರು ಅಲ್ಲಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ಕುಂದಗೋಳಕ್ಕೆ ತೆರಳಲಿದ್ದಾರೆ. ಹೆಲಿಕಾಪ್ಟರ್ ನಿಲುಗಡೆಗಾಗಿ ಎತ್ತಿನಗುಡ್ಡದ ಸರ್ಕಾರಿ ಶಾಲಾ ಆವರಣದಲ್ಲಿ ಟಾರ್ ಹಾಕಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ.
ಜೋಶಿ ಪರಿಶೀಲನೆ:ಧಾರವಾಡಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆ ಧಾರವಾಡದ ಕೃಷಿ ವಿವಿ ಮೈದಾನಕ್ಕೆ ಶುಕ್ರವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮಿಸಿ ಸ್ಥಳ ಪರಿಶೀಲನೆ ಮಾಡಿದರು. ಕೇಂದ್ರ ಸಚಿವ ಜೋಶಿ ಅವರಿಗೆ ಶಾಸಕ ಅಮೃತ ದೇಸಾಯಿ, ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಡಿಸಿ ಗುರುದತ್ ಹೆಗಡೆ, ಹುಧಾ ಕಮಿಷನರ್ ರಮನಗುಪ್ತ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಸಾಥ್ ನೀಡಿದ್ದರು.
ಬಳಿಕ ಕೆಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗ್ಗೆ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬರಲಿದ್ದಾರೆ. ನಂತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಅರ್ಧ ಗಂಟೆ ಕಾರ್ಯಕ್ರಮ ನಡೆಯಲಿದೆ. ಅಲ್ಲಿಂದ ನೇರವಾಗಿ ಕುಂದಗೋಳಕ್ಕೆ ಹೋಗಲಿದ್ದಾರೆ. ನಂತರ ಕಿತ್ತೂರು ಮೂಲಕ ಬೆಳಗಾವಿ ಪ್ರವಾಸ ಮಾಡಲಿದ್ದಾರೆ. ಇದು ಒಂದು ಪ್ರತಿಷ್ಠಿತ ಕ್ಯಾಂಪಸ್. ಗುಜರಾತ್ ವಿವಿಯವರು ಇದನ್ನು ವಿಶ್ವದರ್ಜೆಯ ವಿವಿ ಕ್ಯಾಂಪಸ್ ಮಾಡಲಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಗುಜರಾತ್ ವಿವಿಯವರಿಗೆ ಧನ್ಯವಾದ ಹೇಳ್ತೀನಿ. ದೊಡ್ಡ ಪ್ರಮಾಣದ ಉದ್ಘಾಟನೆಗೆ ಮಾಡುವ ತೀರ್ಮಾನ ಮಾಡಿದ್ದೇವೆ. ಈಗ ಸಮಯದ ಅಭಾವದಿಂದ ವೇದಿಕೆ ಕಾರ್ಯಕ್ರಮ ಸ್ಥಳ ಬದಲಾವಣೆ ಮಾಡಲಾಗಿದೆ. ಈಗ ಸದ್ಯಕ್ಕೆ ಸಣ್ಣ ಹಾಲ್ನಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಮೋದಿ ಸರ್ಕಾರ ಯಾವುದು ಶಂಕುಸ್ಥಾಪನೆ ಮಾಡಿರುತ್ತೆ, ಅದನ್ನೇ ಉದ್ಘಾಟನೆ ಸಹ ಮಾಡಿದ್ದೇವೆ. ಒಂದು ವರ್ಷದಲ್ಲಿ ಇದನ್ನು ಉದ್ಘಾಟನೆ ಮಾಡುತ್ತೇವೆ. ಸದ್ಯಕ್ಕೆ ತಾತ್ಕಾಲಿಕ ಕ್ಯಾಂಪಸ್ ಆರಂಭಿಸಲು ಡಿಸಿಗೆ ಸೂಚನೆ ನೀಡಿದ್ದೇನೆ ಎಂದರು.
ಐಐಟಿ ಉದ್ಘಾಟನೆ ವಿಚಾರಕ್ಕೆ ಮಾತನಾಡಿದ ಅವರು, ಮಾರ್ಚ್ ಮೊದಲ ವಾರದಲ್ಲಿ ಉದ್ಘಾಟನೆ ಮಾಡುವ ವಿಚಾರ ಇದೆ. ಮೋದಿಯವರು ಹೇಳಿದಂತೆ ಉದ್ಘಾಟನೆಗೆ ತಯಾರಿ ಮಾಡುತ್ತಿದ್ದೇವೆ. ಫೆಬ್ರವರಿ 15ರ ನಂತರ ಮೋದಿಯವರು ಯಾವುದಾದರೂ ಒಂದು ದಿನಾಂಕ ಗುರುತಿಸಲು ಹೇಳಿದ್ದಾರೆ ಎಂದು ತಿಳಿಸಿದರು.