ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ಹುಬ್ಬಳ್ಳಿ :ಕಾಂಗ್ರೆಸ್ ಪಕ್ಷ ತನ್ನ ಓಲೈಕೆ ರಾಜಕಾರಣಕ್ಕೆ ಶಿಕ್ಷಣ ಕ್ಷೇತ್ರವನ್ನು ಬಳಸಿಕೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಿರುವ ಸರ್ಕಾರದ ಧೋರಣೆ ಖಂಡನೀಯ. ಪಠ್ಯಪುಸ್ತಕವನ್ನು ಹಾಳುಗೆಡುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಡಪಂಥೀಯ ಬುದ್ದಿಜೀವಿಗಳ ಕೈಗೊಂಬೆಯಾಗಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತೆಗೆದು ಇದೀಗ ರಾಜ್ಯ ಶಿಕ್ಷಣ ನೀತಿ (ಎಸ್‌ಸಿಪಿ) ಜಾರಿಗೆ ತರಲು ಮುಂದಾಗಿದ್ದಾರೆ. ಇದರಿಂದ ಶಿಕ್ಷಣ ಕ್ಷೇತ್ರ ಗೊಂದಲದ ಗೂಡಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಶ್ರೇಯಸ್ಸು ಎಂದು ಕಿಡಿಕಾರಿದರು.
ಈ ಹಿಂದೆ ನಾನು ಶಿಕ್ಷಣ ಸಚಿವನಾಗಿದ್ದಾಗ ಪಠ್ಯಕ್ರಮ ಪರಿಷ್ಕರಣೆ ಮಾಡಿದ ಸಂದರ್ಭದಲ್ಲಿ ಶಿಕ್ಷಣವನ್ನು ಕೇಸರೀಕರಣ ಮಾಡುತ್ತಿದ್ದಾರೆ ಎಂದು ಗೊಂದಲ ಸೃಷ್ಟಿಸಿದ ಕಾಂಗ್ರೆಸ್, ಕೇಂದ್ರಕ್ಕೆ ಪತ್ರ ಬರೆದು ವಿರೋಧಿಸಿದರು. ಆಗ ಚರ್ಚೆ ನಡೆಸಿ ಅಂತಿಮವಾಗಿ ಪ್ರಕಟಿಸಿದ ಪಠ್ಯಕ್ರಮ ಒನ್ ಆಫ್ ದಿ ಬೆಸ್ಟ್ ಪಠ್ಯಕ್ರಮ ಎಂದು ಹೇಳಲಾಯಿತು. ಬಳಿಕ ಸುಖಾಸುಮ್ಮನೆ ಕಾಂಗ್ರೆಸ್ ಚುನಾವಣೆಯಲ್ಲಿ ಪಠ್ಯಕ್ರಮವನ್ನು ರಾಜಕೀಯ ವಿಷಯವಾಗಿ ಎಳೆದು ತಂದಿದ್ದಾರೆ. ಇದು ದುರಂತ. ಆಧುನಿಕತೆಗೆ ತಕ್ಕಂತೆ ಮಕ್ಕಳು ಸಿದ್ದವಾಗಲು ಹೊಸ ಶಿಕ್ಷಣ ನೀತಿಯಿಂದ ರೂಪಿಸುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ಆದರೆ ಸಿದ್ದರಾಮಯ್ಯ ಓಲೈಕೆ ರಾಜಕಾರಣಕ್ಕೆ ಮುಂದಾಗಿ ಎಸ್‌ಸಿಪಿ ಅಂದರೆ ಸೋನಿಯಾ ಗಾಂಧಿ ಎಜ್ಯುಕೇಶನ್ ಸಿಸ್ಟಮ್ ಜಾರಿಗೊಳಿಸಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯರಿಗೆ ರಾಜ್ಯದ ಬಡಮಕ್ಕಳು ಅಭಿವೃದ್ಧಿ ಆಗುವುದು ಬೇಡ. ಸರ್ಕಾರಿ ಶಾಲೆಯಲ್ಲಿ ಬಡವರನ್ನು ಉನ್ನತ ಶಿಕ್ಷಣದಿಂದ ವಂಚಿತ ಮಾಡುವ ಷಡ್ಯಂತ್ರವನ್ನು ಸರ್ಕಾರ ಮಾಡುತ್ತಿದೆ. ಇದನ್ನು ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜ್ಯುಕೇಶನ್‌ನಿಂದ ತೀವ್ರವಾಗಿ ಖಂಡಿಸಲಾಗುವುದು. ಈ ಬಗ್ಗೆ ರಾಜ್ಯಾದ್ಯಂತ ಅಭಿಯಾನ ಆರಂಭಿಸಿ ರಾಷ್ಟ್ರೀಯ ಶಿಕ್ಷಣ ನೀತಿ ಮುಂದುವರೆಸಲು ಒತ್ತಡ ಹೇರಲಾಗುವುದು ಎಂದರು.
ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ ಇದೀಗ ಕನ್ನಡಿಗರ ಭಾವನೆಯನ್ನು ಧಿಕ್ಕರಿಸಿ ಮನಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಇದೊಂದು ಸ್ವೇಚ್ಛಾಚಾರದ ಸರ್ಕಾರ. ರಾಜ್ಯದ ಜನರು ತಲೆ ತಗ್ಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಕಾನೂನುಬಾಹಿರ ಚಟುವಟಿಕೆ ಮಾಡಿ ಗಲಭೆ ಮಾಡಿದವರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ. ಓಲೈಕೆಯ ರಾಜಕಾರಣದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಶಾಂತಿ ಕದಡುವ ಮನಸ್ಥಿತಿಯ ಜನರಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿದೆ. ಪ್ರತಿ ಹೆಜ್ಜೆಯಲ್ಲೂ ಕಾಂಗ್ರೆಸ್ ತಪ್ಪು ಮಾಡುತ್ತಿದೆ. ಅಭಿವೃದ್ಧಿ ಶೂನ್ಯ ಎಂದು ಹರಿಹಾಯ್ದರು.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ತುಂಬು ಹೃದಯದಿಂದ ಸ್ವಾಗತ ಮಾಡುತ್ತೇನೆ. ಇದು ರಾಜ್ಯದ ಅಭಿವೃದ್ಧಿಗೆ ಪೂರಕವಾಗುತ್ತದೆ. ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ವಿಶ್ವೇಶ್ವರ ಹೆಗಡೆ ಹೇಳಿದರು. ಇದೇ ವೇಳೆ, ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜ್ಯುಕೇಶನ್ ವತಿಯಿಂದ ರಾಜ್ಯ ಸರ್ಕಾರದ ಪಠ್ಯಪುಸ್ತಕ ಹಾಳುಗೆಡವಿದೆ ಎಂಬ ಕುರಿತಂತೆ ಮೀಮ್ಸ್ ಬಿಡುಗಡೆಗೊಳಿಸಿದರು.
ಇದನ್ನೂ ಓದಿ :ಜಾತಿ ಸಮೀಕ್ಷೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟತೆಯೇ ಇಲ್ಲ, ಸರ್ಕಾರ ತನ್ನ ಸ್ಪಷ್ಟ ನಿಲುವು ಬಹಿರಂಗಪಡಿಸಲಿ: ಮಾಜಿ ಸಿಎಂ ಬೊಮ್ಮಾಯಿ ಸವಾಲು