ಧಾರವಾಡ:ಸೂಕ್ತದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 53 ಲಕ್ಷ ಹಣವನ್ನು ಧಾರವಾಡದ ಗರಗ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತೇಗೂರ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಘಟನೆ ನಡೆದಿದೆ. ಚೆಕ್ ಪೋಸ್ಟ್ ತಪಾಸಣೆ ವೇಳೆ ಇನೋವಾ ಕಾರಿನಲ್ಲಿ ನಗದು ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಿಂದ ಹಾವೇರಿ ಜಿಲ್ಲೆಯ ತಡಸಕ್ಕೆ ಹಣ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಕಾರಿನಲ್ಲಿ ಸಂಜು ಹಿರೇಮಠ ಎಂಬ ವ್ಯಕ್ತಿ ಹಣ ತೆಗೆದುಕೊಂಡು ಹೋಗುತಿದ್ದರು. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಹಣ ಹಾಗೂ ಇನೋವಾ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಧಾರವಾಡ ಡಿಎಸ್ಪಿ, ಸಿಪಿಐ ಹಾಗೂ ಗರಗ ಠಾಣೆ ಪಿಎಸ್ಐ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯದಲ್ಲಿ ಗಿಫ್ಟ್ ಬ್ಯಾಗ್‌ಗಳು ವಶಕ್ಕೆ: ಮಂಡ್ಯದಲ್ಲಿ ಇತ್ತೀಚೆಗೆ ಪಕ್ಷವೊಂದರ ಬೆಂಬಲಿಗರು ಮತದಾರರಿಗೆ ಹಂಚುತ್ತಿದ್ದ ಗಿಫ್ಟ್ ಬ್ಯಾಗ್ಗಳನ್ನು ಪೊಲೀಸರು ಸೀಜ್ ಮಾಡಿದ್ದರು. ಸುಮಾರು 800 ಗಿಫ್ಟ್ ಬ್ಯಾಗ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ದಾಖಲೆ ಇಲ್ಲದ ₹ 9 ಲಕ್ಷ ಹಣ ಚೆಕ್ಪೋಸ್ಟ್ನಲ್ಲಿ ಸೀಜ್ : ಎಸ್ಪಿ ಎನ್ ಯತೀಶ್
9 ಲಕ್ಷ ನಗದು, 16 ಲಕ್ಷ ಸೀರೆ ವಶಕ್ಕೆ: ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಕೊಂಡ್ಯೊಯ್ಯುತ್ತಿದ್ದ 9 ಲಕ್ಷ ನಗದು ಮತ್ತು 16 ಲಕ್ಷ ರೂ ಮೌಲ್ಯದ ಸೀರೆಗಳನ್ನು ಮಾ.22ರಂದು ಬೆಳಗಾವಿ ನಗರದ ಹೊರವಲಯದ ಕಣಬರಗಿ ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆಯಲಾಗಿದೆ. ಗೋಕಾಕ್ ತಾಲೂಕಿನ ಅಂಕಲಗಿಗೆ ಹೊರಟ್ಟಿದ್ದ ಕಾರಿನಲ್ಲಿ ದಾಖಲಾತಿಯಿಲ್ಲದ ಹಣ ಪತ್ತೆಯಾಗಿದೆ. ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ನಲ್ಲಿ ಪರಿಶೀಲನೆ ನಡೆಸಿದ ವೇಳೆ ನಗದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿಂತೆ ಓರ್ವನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸೀರೆ ವಶಕ್ಕೆ:ಚಿಕ್ಕೋಡಿಯಲ್ಲಿ ಮತದಾರರಿಗೆ ಹಂಚಲು ಕೊಂಡೊಯ್ಯುತ್ತಿದ್ದ ಸೀರೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸದಲಗಾ ದತವಾಡ ಚೆಕ್ ಪೋಸ್ಟ್ನಲ್ಲಿ ವಾಹನ ತಪಾಸಣೆ ವೇಳೆ ಸೀರೆಗಳು ಪತ್ತೆಯಾಗಿದೆ. ಸುಮಾರು 16 ಲಕ್ಷ ರೂ. ಬೆಲೆ ಬಾಳುವ ಸೀರೆಗಳನ್ನ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಚುನಾವಣೆ ಘೋಷಣೆಗೂ ಮುನ್ನ ಅಖಾಡಕ್ಕಿಳಿದ ಪೊಲೀಸರು: 9 ಲಕ್ಷ ನಗದು, 16 ಲಕ್ಷ ಸೀರೆ ವಶಕ್ಕೆ