ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿಕೆ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಉಣಕಲ್ ಕೆರೆಗೆ ಹೊಂದಿಕೊಂಡಂತೆ ಗಾಲ್ಪ್ ಗ್ರೌಂಡ್ ನಿರ್ಮಾಣಕ್ಕೆ ಖಾಸಗಿ ಸಂಸ್ಥೆ ಮುಂದಾಗಿತ್ತು. ಎನ್.ಜಿ.ಟಿ ನಿಯಮ ಉಲ್ಲಂಘನೆಯಾದ ಬಗ್ಗೆ ಲೋಕಾಯುಕ್ತ ನ್ಯಾಯಮೂರ್ತಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ನಿಟ್ಟಿನಲ್ಲಿ ಈಗ ಅನಧಿಕೃತ ಗಾಲ್ಫ್ ಗ್ರೌಂಡ್ ನಿರ್ಮಾಣ ಮಾಡುತ್ತಿರುವ ಸಂಸ್ಥೆಗೆ ಪಾಲಿಕೆ ಹಾಗೂ ಜಿಲ್ಲಾಡಳಿತ ನೋಟಿಸ್ ನೀಡಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಉಣಕಲ್ ಕೆರೆಯ ಪಕ್ಕದಲ್ಲಿರುವ ಆರ್.ಎನ್.ಎಸ್ ಸಂಸ್ಥೆ ಗಾಲ್ಫ್ ಮೈದಾನ ನಿರ್ಮಿಸುತ್ತಿದೆ. ಗಾಲ್ಫ್ ಮೈದಾನ ನಿರ್ಮಾಣ ಮಾಡುವ ಬಗ್ಗೆ ಸಂಸ್ಥೆ ಇದುವರೆಗೂ ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಮಹಾನಗರ ಪಾಲಿಕೆ ಅಥವಾ ಜಿಲ್ಲಾಡಳಿತ ಅನುಮತಿ ಇಲ್ಲದೆ ಮೈದಾನ ನಿರ್ಮಾಣಕ್ಕೆ ಮುಂದಾಗಿದೆ ಎಂದು ಆರೋಪಿಸಲಾಗಿದೆ.
ಆದರೆ ಸಂಸ್ಥೆ ಕೆಐಎಡಿಬಿಯಿಂದ ಅನುಮತಿ ಪಡೆದೇ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ. ಈಗಾಗಲೇ ಕೆರೆಯ ಸುತ್ತ ಸ್ಮಾರ್ಟ್ ಸಿಟಿ ಯೋಜನೆ ಅಡಿ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಲಾಗಿದೆ. ಈ ಸಂಬಂಧ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, "ಸ್ಥಳದಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ನೋಟಿಸ್ ನೀಡಲಾಗಿದೆ. ಇಲ್ಲಿ ಗಾಲ್ಫ್ ಮೈದಾನ ನಿರ್ಮಾಣ ಮಾಡುವುದರಿಂದ ಉಣಕಲ್ ಕೆರೆಗೆ ನೈಸರ್ಗಿಕವಾಗಿ ಹರಿದು ಬರುವ ನೀರಿನ ಒಳ ಹರಿವು ಕಡಿತವಾಗುತ್ತದೆ ಎಂದು ಸಾರ್ವಜನಿಕರೊಬ್ಬರು ಲೋಕಾಯುಕ್ತರಿಗರ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ" ಎಂದರು.
"ಎನ್.ಜಿ.ಟಿ ನಿಯಮ ಉಲ್ಲಂಘನೆ ಮಾಡಿ ಇಂತಹದೊಂದು ಕಾಮಗಾರಿ ನಡೆಯುತ್ತಿರುವ ಬಗ್ಗೆ ಸೂಕ್ತ ವರದಿಯನ್ನು ನೀಡುವಂತೆ ಲೋಕಾಯುಕ್ತ ನ್ಯಾಯಮೂರ್ತಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಲೋಕಾಯುಕ್ತರು ಹುಡಾ, ಮಹಾನಗರ ಪಾಲಿಕೆ, ಸರ್ವೆ ವಿಭಾಗದ ಹಾಗೂ ಸ್ಮಾರ್ಟ್ ಸಿಟಿ ವಿಭಾಗದಿಂದ ಸಮಗ್ರ ವರದಿ ನೀಡುವಂತೆ ಆದೇಶ ನೀಡಿದೆ. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಲೋಕಾಯುಕ್ತ ಹಾಗೂ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು ಮಹಾನಗರ ಪಾಲಿಕೆ ಮುಂದಾಗಿದೆ" ಎಂದು ಪಾಲಿಕೆ ಆಯುಕ್ತರು ತಿಳಿಸಿದರು.
ಇದನ್ನೂ ಓದಿ:ಅಲ್ಪಸಂಖ್ಯಾತರನ್ನೂ ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದೇನೆ: ಸಿಎಂ ಸಿದ್ದರಾಮಯ್ಯ