ಧಾರವಾಡ:ರಸ್ತೆ ಡಿವೈಡರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ತೇಗೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಭವಿಸಿದೆ. ಕಳೆದ ತಡರಾತ್ರಿ ಧಾರವಾಡದಿಂದ ಊಟಕ್ಕೆ ಢಾಬಾಗೆ ಹೋಗಿದ್ದ ಯುವಕರು ತಮ್ಮ ಕಾರಿನಲ್ಲಿ ವಾಪಸ್ ಬರುವಾಗ ಹೆದ್ದಾರಿ ಡಿವೈಡರ್ಗೆ ಕಾರು ಡಿಕ್ಕಿ ಹೊಡೆದಿದೆ.
ಸ್ಥಳದಲ್ಲಿ ಓರ್ವ ಸಾವನ್ನಪ್ಪಿದ್ದರೆ, ಮತ್ತೋರ್ವ ಚಿಕಿತ್ಸೆ ಫಲಿಸದೇ ಧಾರವಾಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ವಿನಯ ಹಿರೇಮಠ (28) ಹಾಗೂ ಸಂದೀಪ್ (29) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ಮತ್ತೋರ್ವ ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿದ್ದೆ ಮಂಪರಲ್ಲಿ ರಸ್ತೆ ವಿಭಜಕ್ಕೆ ಕಾರು ಡಿಕ್ಕಿ, ಇಬ್ಬರು ವಿದ್ಯಾರ್ಥಿಗಳು ಸಾವು: ಬೆಂಗಳೂರಿನಲ್ಲಿ ಭಾನುವಾರ ಘಟನೆ ನಡೆದಿತ್ತು. ಕಾರಿನಲ್ಲಿ ನಂದಿ ಬೆಟ್ಟಕ್ಕೆ ಖಾಸಗಿ ಕಾಲೇಜಿನ ಒಟ್ಟು ಐವರು ವಿದ್ಯಾರ್ಥಿಗಳು ಟ್ರಿಪ್ ಹೊರಟಿದ್ದರು. ಆದರೆ ಬೆಳಗಿನ ಜಾವ ಹೋಗುವುದು ಬೇಡವೆಂದು ವಾಪಸ್ ಬರುವಾಗ ನಿದ್ದೆ ಮಂಪರಿನಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿಯಾಗಿದೆ. ಪರಿಣಾಮ ವಿದ್ಯಾರ್ಥಿ ಕಾರ್ತಿಕ್ ಜೈನ್ ಎನ್ನುವಾತ ಸ್ಥಳದಲ್ಲೇ ಮೃತಪಟ್ಟರೆ, ಆದರ್ಶ್ ಕುಮಾರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಕಾರಿನಲ್ಲಿದ್ದ ಉಳಿದ ಮೂವರು ವಿದ್ಯಾರ್ಥಿಗಳಿಗೂ ತೀವ್ರವಾಗಿ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.