ಹುಬ್ಬಳ್ಳಿ: ದೇಶದ ಹೆಣ್ಣು ಮಕ್ಕಳು ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆಯ ಶಿಖರವೇರಿ ಕೀರ್ತಿ ತಂದಿದ್ದಾರೆ. ನಾಡಿನ ಕುಗ್ರಾಮದಿಂದ ಬಂದಿರುವ ಹೆಣ್ಣು ಮಕ್ಕಳು ಸಹ ದೇಶಕ್ಕೆ, ರಾಜ್ಯಕ್ಕೆ, ಪೋಷಕರಿಗೆ ಕೀರ್ತಿ ತಂದಿರುವ ಉದಾಹರಣೆಗಳು ಸಾಕಷ್ಟಿವೆ.
ಅದೇ ರೀತಿ ವಾಣಿಜ್ಯ ನಗರಿ ಹುಬ್ಬಳ್ಳಿಯ ಒಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ರಾಜ್ಯವೇ ಪುರಸ್ಕರಿಸುವಂತಹ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಲ್ಲಿನ ಶೋಭಾ - ವಿನೋದ್ ಕುಮಾರ್ ದಂಪತಿಯ ಪುತ್ರಿಯರಾದ ರಚಿತಾ ಹಾಗೂ ಖುತು, ಜಿಮ್ನಾಸ್ಟಿಕ್ ಹಾಗೂ ನೃತ್ಯ ಕ್ಷೇತ್ರದಲ್ಲಿ ಸಾಧನೆಯ ಮೈಲಿಗಲ್ಲು ಏರಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಇಬ್ಬರು ಪುತ್ರಿಯರು..ಬೆನ್ನಿಗೆ ನಿಂತು ಪ್ರೋತ್ಸಾಹಿಸಿದ ಕುಟುಂಬ ಇದರಲ್ಲಿ 11ನೇ ತರಗತಿ ಓದುತ್ತಿರುವ ಹಿರಿಯ ಪುತ್ರಿ ರಚಿತಾ ಜಾನಪದ ಹಾಗೂ ಪಾಶ್ಚಿಮಾತ್ಯ ನೃತ್ಯದ ಮೂಲಕ ಎಲ್ಲೆಡೆ ಹೆಸರುವಾಸಿಯಾಗಿದ್ದಾರೆ. ತನ್ನ ನೃತ್ಯಕ್ಕೆ ತಾನೇ ನೃತ್ಯ ಸಂಯೋಜನೆ ಮಾಡುವ ಈಕೆ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ನೃತ್ಯ ಕಲೆಯ ಮೇಲೆ ಆಸಕ್ತಿ ಹೊಂದಿದ್ದ ಈಕೆಗೆ ಪೋಷಕರು ಪ್ರೋತ್ಸಾಹಿಸಿ ಈ ಮಟ್ಟದ ಸಾಧನೆಗೆ ದಾರಿಯಾಗಿದ್ದಾರೆ.
3ನೇ ತರಗತಿಯಲ್ಲಿ ಓದುತ್ತಿರುವ ದ್ವಿತೀಯ ಪುತ್ರಿ ಖುತು ಜಿಮ್ನಾಸ್ಟಿಕ್ನಲ್ಲಿ ಮಿಂಚುತ್ತಿದ್ದಾಳೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಜಿಮ್ನಾಸ್ಟಿಕ್ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಲ್ಲದೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾಳೆ. ಮೊದಲ ಸಲ ಅಲಹಾಬಾದ್ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ 5, ರಾಜಸ್ಥಾನದಲ್ಲಿ 3 ಹಾಗೂ ಚೆನ್ನೈನಲ್ಲಿ 24ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ.
ಈ ಇಬ್ಬರು ಪುತ್ರಿಯರ ಸಾಧನೆಯ ಬಗ್ಗೆ ಪೋಷಕರು ಹರ್ಷ ವ್ಯಕ್ತಪಡಿಸಿದ್ದು, ಮಕ್ಕಳ ಸಾಧನೆಗಾಗಿ ಇನ್ನಷ್ಟು ಪ್ರೋತ್ಸಾಹ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.