ಹುಬ್ಬಳ್ಳಿ:ನಗರದ ಶಿವಳ್ಳಿ ರಸ್ತೆಯ ರೈಲ್ವೆ ಹಳಿ ಪಕ್ಕದ ಜಮೀನಿನಲ್ಲಿ ಯುವಕನೊಬ್ಬ ಕೊಲೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಸಪ್ತಗಿರಿ ಪಾರ್ಕ್‌ನ ಆಟೋ ರಿಕ್ಷಾ ಚಾಲಕ ಮಂಜುನಾಥ ಕಟ್ಟಿಮನಿ ಹಾಗೂ ಬಿಡ್ತಾಳ ಮಾರುತಿ ನಗರದ ಟೇಲರ್ ಕಿರಣ ಶಿರಸಂಗಿ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಂದ ಎರಡು ಬೈಕ್, ಎರಡು ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಅರುಣ ವನಹಳ್ಳಿ ಬೆಂಡೆ ಹಾಗೂ ಇತರರು ಪರಾರಿಯಾಗಿದ್ದಾರೆ.
ಪ್ರಕರಣದ ಹಿನ್ನೆಲೆ: ಅ. 24 ರಂದು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ಹನುಮರಹಳ್ಳಿಯ ಫಕ್ಕೀರೇಶ ಮಂಜುನಾಥ ಸವಣೂರ (22) ಎಂಬ ಯುವಕನ್ನು ಕೊಲೆ ಮಾಡಲಾಗಿತ್ತು. ಫಕೀರೇಶ ಅಂದು ಸ್ನೇಹಿತರೊಂದಿಗೆ ನಗರಕ್ಕೆ ಆಗಮಿಸಿದ್ದ. ರಾತ್ರಿ ಎಲ್ಲರೂ ಸೇರಿ ಮದ್ಯದ ಪಾರ್ಟಿ ಮಾಡಿದ್ದಾರೆ. ಈ ವೇಳೆ, ಹಣಕಾಸಿನ ವಿಷಯವಾಗಿ ಸ್ನೇಹಿತರ ನಡುವೆ ಜಗಳವಾಗಿದೆ. ಗಲಾಟೆ ವಿಕೋಪಕ್ಕೆ ಹೋದಾಗ ಅಮಲಿನಲ್ಲಿ ಮದ್ಯದ ಬಾಟಲಿಯಿಂದ ಫಕೀರೇಶನ ಕುತ್ತಿಗೆಗೆ ಮನಬಂದಂತೆ ಇರಿದಾಗ ಆತ ಸ್ಥಳದಲ್ಲೇ ಅಸುನೀಗಿದ್ದಾನೆ. ಆತನನ್ನು ಅಲ್ಲಿಯೇ ಬಿಟ್ಟು ಎಲ್ಲರೂ ಪರಾರಿಯಾಗಿದ್ದರು. ಖಚಿತ ಮಾಹಿತಿ ಆಧರಿಸಿ ಅಶೋಕನಗರ ಪೊಲೀಸರು ಮಂಜುನಾಥ ಮತ್ತು ಕಿರಣ ಎಂಬುವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳಾದ ಅರುಣ, ಬೆಂಡೆ ಮತ್ತು ಇತರರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.