ಧಾರವಾಡ: ಸಾರಿಗೆ ನೌಕರರು ವೇತನ ಜಾರಿ, ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು ಸೇರಿದಂತೆ ಅವರ ಬೇಡಿಕೆಗಳು ನ್ಯಾಯಯುತವಾಗಿವೆ. ಸರ್ಕಾರ ಈಡೇರಿಸುವ ಬದಲು ಎಸ್ಮಾ ಜಾರಿ ಮಾಡಿ ಕೆಲಸದಿಂದ ವಜಾ ಸೇರಿದಂತೆ ವಿವಿಧ ರೀತಿಯಲ್ಲಿ ದಬ್ಬಾಳಿಕೆ ನಡೆಸುತ್ತಿದೆ ಎಂದು ಚಲನಚಿತ್ರ ನಟ ಚೇತನ್ ಆರೋಪಿಸಿದರು.
ಸಾರಿಗೆ ನೌಕರರ ಮೇಲೆ ಸರ್ಕಾರದ ದಬ್ಬಾಳಿಕೆ ಹೆಚ್ಚಿದೆ ಎಂದ ನಟ ಚೇತನ್ ಸೋಮವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಈ ಹಿಂದೆ ಭರವಸೆ ನೀಡಿತ್ತು. ಇದೀಗ ಸರ್ಕಾರ ಮಾತು ತಪ್ಪಿದೆ. 2016 ರಿಂದ 9 ಬೇಡಿಕೆಗೆ ಸಾರಿಗೆ ನೌಕರರು ಒತ್ತಾಯಿಸಿದ್ದರು. ಆದ್ರೆ ಸರ್ಕಾರ ಕಿವಿಗೊಡುತ್ತಿಲ್ಲ ಎಂದು ಹರಿಹಾಯ್ದರು.
ಬೆಳಗಾವಿ ಜಿಲ್ಲೆಯ ಸವದತ್ತಿ ವಿಭಾಗದ ಸಾರಿಗೆ ಸಿಬ್ಬಂದಿ ಆತ್ಮಹತ್ಯೆಗೆ ಸರ್ಕಾರವೇ ಹೊಣೆ. ಇದೊಂದು ವ್ಯವಸ್ಥಿತ ಕೊಲೆ. ಆತನ ಪತ್ನಿ ಹಾಗೂ ಮೂವರು ಮಕ್ಕಳಿಗೆ ಸಾಂತ್ವನ ಹೇಳಿದೆ. ಅಲ್ಲದೇ, ಅವರ ಮಕ್ಕಳ ಶೈಕ್ಷಣಿಕ ವೆಚ್ಚ ಭರಿಸುವ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನೌಕರರ ಮೇಲೆ ಸರ್ಕಾರದ ದೌರ್ಜನ್ಯ ಹೆಚ್ಚಿದೆ ಎಂದು ಚೇತನ್ ವಾಗ್ದಾಳಿ ನಡೆಸಿದರು.
ಸಾರಿಗೆ ಸಚಿವರ ತವರಿನಲ್ಲೂ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡರೂ ಸ್ಪಂದಿಸದಿರುವುದು ಅತ್ಯಂತ ನಾಚಿಕೆಗೇಡು. ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಎಂಬ ಸಚಿವರ ಹೇಳಿಕೆ ಅವರ ಬೇಜಾವಾಬ್ದಾರಿ ತೋರಿಸುತ್ತದೆ ಎಂದು ಚೇತನ್ ಕಿಡಿಕಾರಿದರು.