ಹುಬ್ಬಳ್ಳಿ:ಬೆಂಗಳೂರು ಹೊರತುಪಡಿಸಿದರೆ ಹುಬ್ಬಳ್ಳಿಯ ಬಸ್ ನಿಲ್ದಾಣವು ದೊಡ್ಡದಾಗಿದೆ. ಈ ಜಾಗವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕಿದೆ. ಶಕ್ತಿ ಯೋಜನೆ ಆರಂಭಗೊಂಡಾಗ 84 ಲಕ್ಷ ಮಹಿಳೆಯರು ಪ್ರಯಾಣಿಸಿದ್ದರು. ಈಗ 1 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಲಾಭ ಪಡೆದಿದಿದ್ದಾರೆ. ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 884 ಹೊಸ ಬಸ್ಗಳನ್ನು ಪೂರೈಸಲಾಗುತ್ತದೆ. ಅದರಲ್ಲಿ 100 ಎಲೆಕ್ಟ್ರಿಕ್ ಬಸ್ಗಳನ್ನು ಹುಬ್ಬಳ್ಳಿ -ಧಾರವಾಡ ನಗರ ಸಂಚಾರಕ್ಕೆ ನೀಡಲಾಗುತ್ತದೆ. ಉಳಿದ 784 ಬಸ್ಗಳು ಫೆಬ್ರವರಿ ಕೊನೆಯಲ್ಲಿ ಬರಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಇಂದು ಗೋಕುಲ್ ರಸ್ತೆಯ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಧಾರವಾಡ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣದ ಶಂಕು ಸ್ಥಾಪನೆ, ಹುಬ್ಬಳ್ಳಿ ಗೋಕುಲ್ ರಸ್ತೆಯ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಪಲ್ಲಕ್ಕಿ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೇರೆ ಸಾರಿಗೆ ನಿಗಮಗಳಲ್ಲಿ ನೀಡಲಾಗುವ ಅಪಘಾತ ಪರಿಹಾರ ವಿಮೆಯಂತೆ ಈ ಸಂಸ್ಥೆಯಲ್ಲಿಯೂ ಸಹ ರೂ.1 ಕೋಟಿ ಅಪಘಾತ ಪರಿಹಾರ ವಿಮೆಯನ್ನು ಹೆಚ್ಚಿಸಬೇಕಾಗಿದೆ. 9 ಸಾವಿರ ಜನರಿಗೆ ಉದ್ಯೋಗ ನೀಡಲಾಗಿದೆ. 3,800 ಬಸ್ಗಳು ಕೋವಿಡ್ ಸಮಯದಲ್ಲಿ ಬಂದ್ ಆಗಿದ್ದವು. ಈಗ ಪುನಃ ಆರಂಭಗೊಂಡಿವೆ. ಇದರಿಂದ ಶಕ್ತಿ ಯೋಜನೆಗೆ ಬಸ್‌ಗಳ ಕೊರತೆ ನೀಗಿದಂತಾಗಿದೆ. ಈ ಭಾಗದ ಜನರಿಗೆ ಹಳೆ ಬಸ್ಗಳನ್ನು ಕೊಡದೇ ಬ್ರ್ಯಾಂಡ್ ಹೊಸ ಬಸ್ಗಳನ್ನು ನೀಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.