ಧಾರವಾಡ: ಕಾಲೇಜು ಜೀವನವೇ ಒಂದು ಸಂಭ್ರಮ. ಆ ದಿನಗಳಲ್ಲಿ ಏನೇ ಮಾಡಿದರೂ ಅದು ಚೆಂದವಾಗಿರುತ್ತೆ. ಜೀವನ ಪೂರ್ತಿ ಆ ದಿನಗಳು ನೆನಪಿನಲ್ಲಿ ಉಳಿಯುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಏನಾದರೂ ನೆನಪಿನಲ್ಲಿ ಉಳಿಯುವಂಥ ಚಟುವಟಿಕೆ ಮಾಡಬೇಕು ಎಂಬ ನಿರೀಕ್ಷೆಯಲ್ಲಿ ಸದಾ ಇರುತ್ತಾರೆ. ಹೀಗಾಗಿ ಧಾರವಾಡದ ಕಾಲೇಜೊಂದರಲ್ಲಿ ಇವತ್ತು ಸಂಭ್ರಮದ ವಾತಾವರಣವನ್ನೇ ನಿರ್ಮಾಣ ಮಾಡಿದ್ದರು.
ನಗರದ ಛತ್ರಪತಿ ಶಿವಾಜಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಂದಿದ್ದು ಬೈಕ್, ಸೈಕಲ್ ಅಥವಾ ಬಸ್ಸಿನಲ್ಲಿ ಅಲ್ಲ. ಬದಲಿಗೆ ಅವರೆಲ್ಲಾ ಬಂದಿದ್ದು ಸಿಂಗರಿಸಿದ ಚಕ್ಕಡಿಯಲ್ಲಿ. ಸಾಂಪ್ರದಾಯಿಕ ದಿನದ ಹಿನ್ನೆಲೆಯಲ್ಲಿ ಡಿಫರೆಂಟ್ ಆಗಿ ಕಾಲೇಜಿಗೆ ಎಂಟ್ರಿ ಕೊಟ್ಟ ವಿದ್ಯಾರ್ಥಿಗಳು, ಇಡೀ ದಿನ ಕಾಲೇಜಿನಲ್ಲಿ ಎಂಜಾಯ್ ಮಾಡಿದರು.
ಧಾರವಾಡದ ಛತ್ರಪತಿ ಶಿವಾಜಿ ಪದವಿ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನವನ್ನ ಆಚರಣೆ ಮಾಡಲಾಯಿತು ಚಕ್ಕಡಿಯ ಹಿಂದೆ ಹಾಗೂ ಮುಂದೆ ಶಿವಾಜಿ ಮಹಾರಾಜರ ಬಾವುಟ ಕಟ್ಟಿ, ಎತ್ತುಗಳಿಗೆ ಶೃಂಗಾರ ಮಾಡಲಾಗಿತ್ತು. ಇನ್ನು ನಿತ್ಯವೂ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಧರಿಸಿ ಬರುತ್ತಿದ್ದ ವಿದ್ಯಾರ್ಥಿಗಳು ಇಂದು ಧೋತಿ, ಜುಬ್ಬಾ ಧರಿಸಿ ಬಂದಿದ್ದರು. ಇನ್ನು ವಿದ್ಯಾರ್ಥಿನಿಯರು ತಾವೂ ಯಾರಿಗೂ ಕಮ್ಮಿ ಇಲ್ಲ ಅನ್ನುವಂತೆ ಚೂಡಿ, ಪ್ಯಾಂಟ್ ಬಿಟ್ಟು ಥೇಟ್ ಹಳ್ಳಿ ಶೈಲಿಯ ಮಹಿಳೆಯರಂತೆ ಇಳಕಲ್ ಸೀರೆ ಉಟ್ಟು, ಮೂಗಿಗೆ ನತ್ತು, ಕೊರಳಲ್ಲಿ ನೆಕ್ಲೆಸ್, ಬಗೆ ಬಗೆಯ ಬಳೆ, ತಲೆಯಲ್ಲಿ ಹೂವು ಮುಡಿದು ಬಂದಿದ್ದರು.
ಇನ್ನು ಕೆಲ ಯುವಕರಂತೂ ಥೇಟ್ ರೈತರ ಗೆಟಪ್ನಲ್ಲಿ ಬಂದು ಅಚ್ಚರಿ ಮೂಡಿಸಿದರು. ಹೆಗಲ ಮೇಲೆ ಬಾರುಕೋಲು ಹಾಕಿಕೊಂಡೇ ಇಡೀ ದಿನ ಕಳೆದಿದ್ದು ವಿಶೇಷವಾಗಿತ್ತು. ಬಳಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿ ರಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿ ಗಮನ ಸೆಳೆದರು.