ಹುಬ್ಬಳ್ಳಿ:ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಹಣ ಬಿಡುಗಡೆ ಮಾಡಿದೆ. ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ತಾಂತ್ರಿಕ ಕಾರಣ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ತಡೆ ಹಿಡಿಯದೆ ವೇಗವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸೂಚಿಸಿದ್ದಾರೆ.
ಅಧಿಕಾರಿಗಳೊಂದಿಗೆ ಸಚಿವ ಜಗದೀಶ್ ಶೆಟ್ಟರ್ ಸಭೆ ನಗರದ ಅತಿಥಿ ಗೃಹದಲ್ಲಿ ಕುಡಿಯುವ ನೀರು ಸರಬರಾಜು, ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಗರದ ಹಲವು ಭಾಗದಲ್ಲಿ ಏಳು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿರುವ ಕುರಿತು ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ನೀರಸಾಗರ, ಮಲಪ್ರಭಾ ನೀರಿನ ಕೊರತೆಯಿಲ್ಲ. ಆದರೂ ನೀರು ಸರಬರಾಜಿನಲ್ಲಿ ಏಕೆ ವ್ಯತ್ಯಾಸವಾಗುತ್ತಿದೆ ಎಂದು ನಗರ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಹಾಗೂ ಗುತ್ತಿಗೆದಾರನ್ನು ಪ್ರಶ್ನಿಸಿದರು.
ಪೈಪ್ಲೈನ್ ದುರಸ್ತಿ ಕಾರಣದಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಸದ್ಯ ನೀರಿನ ಸರಬರಾಜು ಸಮಯಕ್ಕೆ ಸರಿಯಾಗಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು. ಗುತ್ತಿಗೆದಾರರಿಗೆ ಮಂಡಳಿಯಿಂದ 4 ಕೋಟಿ ರೂ. ಕಾಮಗಾರಿಗಾಗಿ ಪಾವತಿಯಾಗದೆ ಇರುವುದರಿಂದ ನಿರ್ವಹಣೆ ಹೊಣೆ ಕಷ್ಟವಾಗುತ್ತದೆ ಎಂದು ಸಚಿವರಲ್ಲಿ ಮನವಿ ಮಾಡಿದರು.
ಓದಿ:ರಾಜ್ಯದಲ್ಲಿಂದು 413 ಮಂದಿಗೆ ಕೊರೊನಾ ದೃಢ: ಇಬ್ಬರು ಬಲಿ
ಮಹಾನಗರ ವ್ಯಾಪ್ತಿಯಲ್ಲಿ ಎಲ್ ಅಂಡ್ ಟಿ ಕಂಪನಿ 24X7 ನೀರು ಸರಬರಾಜು ಯೋಜನೆ ಕುರಿತು ಸರ್ವೇ ಕಾರ್ಯ ಆರಂಭಿಸಿದೆ. ಕಂಪನಿಗೆ ನೀರು ಸರಬರಾಜು ವ್ಯವಸ್ಥೆ ಹಸ್ತಾಂತರಿಸುವ ಮುನ್ನ ಎಲ್ಲಾ ಗುತ್ತಿಗೆದಾರರ ಬಾಕಿ ಹಣ ಪಾವತಿ ಮಾಡಿ. ಈ ಕುರಿತು ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಶೀಘ್ರವಾಗಿ ಸಭೆ ನಡೆಸುತ್ತೇನೆ. ನೀರು ಸರಬರಾಜು ವ್ಯವಸ್ಥೆಯನ್ನು ಎಲ್ ಅಂಡ್ ಟಿ ಕಂಪನಿಯವರು ಸಂಪೂರ್ಣ ಸ್ವತಃ ಕಾರ್ಯಾಚರಣೆ ಮಾಡುವವರೆಗೆ ಮಂಡಳಿ ಅಧಿಕಾರಿಗಳು ಜೊತೆಯಲ್ಲಿದ್ದು ಕಾರ್ಯನಿರ್ವಹಿಸಿ ಎಂದರು.
ಸದ್ಯ 24X7 ನೀರು ಸರಬರಾಜು ಕಾರ್ಯ ವ್ಯವಸ್ಥೆ ನಿರ್ವಹಿಸುತ್ತಿರುವ ಕಂಪನಿಯರಿಗೆ, ಅವರು ಪೂರ್ಣಗೊಳಿಸಿದ ಆಧಾರದ ಮೇಲೆ ಹಣ ಪಾವತಿ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದರು.
ವಿಳಂಬ ಮಾಡದೆ ಕಾಮಗಾರಿಗಳನ್ನು ಆರಂಭಿಸಿ:
ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಅನುದಾನ ಬಿಡುಗಡೆಯಾಗಿದೆ. ಯೋಜನೆಯ ಕಾಮಗಾರಿಗಳಿಗೆ ಟೆಂಡರ್ ಕರೆದು ತತ್ವರಿತವಾಗಿ ಕಾರ್ಯಾದೇಶ ನೀಡಿ. ಜನಪ್ರತಿನಿಧಿಗಳ ಅನುದಾನದ ಅಡಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ. ಅಧಿಕಾರಿಗಳು ತಾಂತ್ರಿಕ ಕಾರಣ ನೀಡಿ, ಕಾಮಗಾರಿ ಕೈಗೊಳ್ಳದೆ ಅನುದಾನ ಉಳಿಯುತ್ತದೆ. ಶಾಸಕರು ಅನುದಾನ ಬಳಸದೆ ಹಾಗೆಯೇ ಸರ್ಕಾರಕ್ಕೆ ಹಣ ಹಿಂದಿರುಗಿದೆ ಎಂದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತದೆ. ಇದಕ್ಕೆ ಅವಕಾಶ ನೀಡದೆ ಅನುದಾನ ಸಂಪೂರ್ಣ ಬಳಕೆ ಆಗಬೇಕು ಎಂದರು.
ಬೆಳಗಾವಿ ವಿಭಾಗ ಮಟ್ಟದ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್, ನಗರೋತ್ಥಾನ ಯೋಜನೆಯಡಿ ಸಂಚಾರಿ ವೃತ್ತಗಳ ಅಭಿವೃದ್ಧಿ, ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ, ಸ್ಮಾರ್ಟ್ ಸಿಟಿ ಯೋಜನೆಯಡಿ ಸಂಚಾರಿ ಗ್ರಂಥಾಲಯ ಸ್ಥಾಪನೆ, ವಿದ್ಯಾನಗರ ಹಾಗೂ ಕಮರೀಪೇಟೆ ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಜಾಗ ಒದಗಿಸುವುದು, ವಿದೇಶಗಳಿಗೆ ವಲಸೆ ಹೋಗುವವರಿಗೆ ರಕ್ಷಣೆ ಹಾಗೂ ತರಬೇತಿ ನೀಡುವ ಕಚೇರಿಯನ್ನು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಸ್ಥಾಪಿಸುವುದರ ಕುರಿತು ಸಚಿವರೊಂದಿಗೆ ಚರ್ಚಿಸಿದರು.