ಹುಬ್ಬಳ್ಳಿ :ಸಾವಿನ ಹೆದ್ದಾರಿ ಎಂದೇ ಅಪಖ್ಯಾತಿ ಹೊಂದಿರುವ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಷಟ್ಪಥ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಸಿರು ನಿಶಾನೆ ತೋರಿದೆ.
ನಾಲ್ಕು ವರ್ಷಗಳಲ್ಲಿ 89 ಜನರನ್ನ ಬಲಿ ತೆಗೆದುಕೊಂಡ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಈಗಲಾದ್ರೂ ಅಸ್ತು ಎಂದಿದ್ದು, ಅವಳಿ ನಗರದ ಜನರು ನಿಟ್ಟುಸಿರು ಬಿಡುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿ ನಿರ್ಮಾಣದ ಭೂಮಿಪೂಜೆಗೆ ಸಿದ್ದವಾಗಿದೆ. ಷಟ್ಪಥ ಎಕ್ಸ್‌ಪ್ರೆಸ್ ಹೈವೇ ಜೊತೆಗೆ ನಾಲ್ಕು ಪಥ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಫೆ.28ರಂದು(ನಾಳೆ) ಶಂಕುಸ್ಥಾಪನೆ ನೆರವೇರಲಿದೆ. ಒಟ್ಟು 1,200 ಕೋಟಿ ರೂಪಾಯಿ ವೆಚ್ಚದಲ್ಲಿ ಹೆದ್ದಾರಿಯನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಡುತ್ತಿದೆ.
ಹುಬ್ಬಳ್ಳಿ-ಧಾರವಾಡ ನಡುವೆ ಇರೋ ರಾಷ್ಟ್ರೀಯ ಹೆದ್ದಾರಿ ಪುಣೆ-ಬೆಂಗಳೂರು ಸಂಪರ್ಕ ಕಲ್ಪಿಸುತ್ತಿದೆ. ಆದರೆ, ಅವಳಿ ನಗರದ ಮಧ್ಯೆ ಕೇವಲ ದ್ವಿ-ಪಥವಿತ್ತು. ರಸ್ತೆ ಕಿರಿದಾಗಿದ್ದರಿಂದ ಬೈಪಾಸ್‌ನಲ್ಲಿ ಭೀಕರ ರಸ್ತೆ ಅಪಘಾತಗಳು ಹೆಚ್ಚಾಗಿದ್ದವು. ಸುಗಮ ರಸ್ತೆ ಸಂಚಾರಕ್ಕೂ ತೊಂದರೆಯಾಗಿತ್ತು.
ಕೇವಲ 30 ಕಿಲೋಮೀಟರ್ ಅಂತರವನ್ನು ದಾಟಲು ಗಂಟೆಗಟ್ಟಲೇ ಸಮಯ ಹಿಡಿಯುತ್ತಿತ್ತು. ಇದಲ್ಲದೆ ಕಳೆದ ವರ್ಷ ಜನವರಿಯ ಒಂದೇ ದಿನ 11 ಜನರನ್ನು ಬಲಿ ಪಡೆದಿತ್ತು. ಆ ದುರಂತಕ್ಕೆ ಪ್ರಧಾನಿಯೂ ಕಂಬನಿ ಮಿಡಿದಿದ್ದರು. 2018ರಿಂದ ಈವರೆಗೆ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ 528 ಅಪಘಾತಗಳು ಸಂಭವಿಸಿ, 89 ಜನ ಸಾವನ್ನಪ್ಪಿ, 542 ಜನ ಗಾಯಗೊಂಡಿದ್ದಾರೆ.
ಬಹುತೇಕ ಅಪಘಾತಗಳು ರಾತ್ರಿ ವೇಳೆಯಲ್ಲಿಯೇ ಸಂಭವಿಸಿದ್ದವು. ಓವರ್ ಟೇಕ್ ಮಾಡಲು ಹೋದ ಸಂದರ್ಭದ ಅಪಘಾತಗಳಿಂದ ಹೆಚ್ಚಿನ ಅನಾಹುತಗಳು ಸಂಭವಿಸಿದ್ದವು. ಒಂದರ್ಥದಲ್ಲಿ ಸಾವಿನ ಹೆದ್ದಾರಿ ಅಂತಲೇ ಇದು ಕುಖ್ಯಾತಿ ಪಡೆದಿತ್ತು.