ಕೇಂದ್ರ ಸಚಿವ ಗಡ್ಕರಿಗೆ ಜೀವ ಬೆದರಿಕೆ ಪ್ರಕರಣ: ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಹುಬ್ಬಳ್ಳಿ:ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಜೈಲಿನಿಂದಲೇ ಕರೆ ಹೋಗಿರುವುದರಿಂದ ಖಂಡಿತವಾಗಿಯೂ ಆರೋಪಿಗಳು ಸಿಗ್ತಾರೆ. ಕರೆ ಮಾಡಿದವರ ಹಿನ್ನೆಲೆ ಏನು? ಅವರ ಹಿಂದೆ ಯಾರಿದ್ದಾರೆ ಅನ್ನೋದು ಬಹಳ ಮುಖ್ಯ. ಇದನ್ನು ಆದಷ್ಟು ಬೇಗ ಕಂಡುಹಿಡಿಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಇಂದು ಯುವಜನೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮ ಮಾಡುತ್ತಿದ್ದೇವೆ. ಅನುರಾಗ್ ಸಿಂಗ್ ಠಾಕೂರ್ ಕೂಡ ಬಂದಿದ್ದಾರೆ. ಯುವಜನೋತ್ಸವವು ಬಹಳ ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಅದ್ಭುತವಾಗಿ ಮೂಡಿಬಂದಿದೆ. ಈ ರೀತಿಯ ಕಾರ್ಯಕ್ರಮಗಳು ಯುವಕರಿಗೆ ಸದಾ ಸ್ಪೂರ್ತಿ ನೀಡುತ್ತದೆ. ನಾವು ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಾಗಿ ಅವಕಾಶ ಕೊಟ್ಟು, ಅವರ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಯುವಜನೋತ್ಸವ ಅಲ್ಲ ವಿನಾಶೋತ್ಸವ ಎಂದ ಕಾಂಗ್ರೆಸ್ಗೆ ತಿರುಗೇಟು ನೀಡಿ, ಅವರದ್ದು ಯಥಾ ಬುದ್ದಿ ತಥಾ ಮಾತು. ಕಾಂಗ್ರೆಸ್ಗೆ ಅವರ ವಿನಾಶದ ಕನಸುಗಳು ಬೀಳ್ತಿವೆ. ಯಾವುದಾದರೊಂದು ಒಳ್ಳೆಯ ಕೆಲಸಗಳು ನಡೆದಲ್ಲಿ ಅದನ್ನು ಪ್ರಶಂಸಿಸುವ ಗುಣವೇ ಅವರಿಗಿಲ್ಲ. ಇತ್ತೀಚೆಗೆ ಅವರ ಭಾಷೆ, ನಡವಳಿಕೆ, ಚಿಂತನೆ ಎಲ್ಲವೂ ರಾಜ್ಯ ಮತ್ತು ದೇಶದ ಪ್ರಗತಿ ವಿಚಾರವಾಗಿಲ್ಲ. ಎಲ್ಲದರಲ್ಲೂ ಕೀಳು ಮಟ್ಟದ ಮಾತುಗಳನ್ನೇ ಆಡುತ್ತಿದ್ದಾರೆ. ಅವರ ಮಾತುಗಳಿಗೆ ಬಹಳಷ್ಟು ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ:ಯುವಜನೋತ್ಸವ: 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..' ಹಾಡಿದ ಸಚಿವ ಪ್ರಹ್ಲಾದ್ ಜೋಶಿ
'ನಾ ನಾಯಕಿ' ಕಾರ್ಯಕ್ರಮದ ಬಗ್ಗೆ ಸಿಎಂ ವ್ಯಂಗ್ಯ:ಪ್ರಿಯಾಂಕಾ ಗಾಂಧಿ ಬೆಂಗಳೂರಿಗೆ ಬರಲಿ ಬಿಡಿ. ಅದಕ್ಕೆ ನಮ್ಮ ತಕರಾರು ಇಲ್ಲ. ಆದರೆ ಅವರ ಕಾರ್ಯಕ್ರಮದ ಟೈಟಲ್ ನೋಡಿದೆ. ನಾ ನಾಯಕಿ ಅಂತ ಹಾಕಿಕೊಂಡಿದ್ದಾರೆ. ಹಾಗಂದ್ರೇನು? ಅವರ ಫೋಟೋ ಹಾಕಿ ಅವರೇ ನಾ ನಾಯಕಿ ಅಂತ ಹೇಳ್ತಿದ್ದಾರೆ. ನಮ್ಮ ಕರ್ನಾಟಕದ ಮಹಿಳೆಯರು ಅವರನ್ನು ನಾಯಕಿ ಮಾಡಲು ತಯಾರಿಲ್ಲ. ಈಗಾಗಲೇ ಮಹಿಳೆಯರಿಗೆ ಪ್ರತ್ಯೇಕ ಬಜೆಟ್ ನೀಡುತ್ತೇವೆ ಎಂದೆಲ್ಲಾ ಹೇಳಿದ್ದಾರೆ. ಅವರಿಗೆ ಅಧಿಕಾರ ಸಿಗುದಿಲ್ಲ ಅಂತಾ ಚೆನ್ನಾಗಿಯೇ ಗೊತ್ತಿದೆ. ಹಾಗಾಗಿಯೇ ಏನೇನೋ ಆಶ್ವಾಸನೆ ಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇನ್ನೂ ದೆಹಲಿ ಭೇಟಿ, ಸಂಪುಟ ವಿಸ್ತರಣೆ ಕುರಿತ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಏನಿದು ಗಡ್ಕರಿಗೆ ಜೀವ ಬೆದರಿಕೆ ಪ್ರಕರಣ?:ಶನಿವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕಚೇರಿಗೆ ಮೂರು ಬೆದರಿಕೆ ಕರೆಗಳು ಬಂದಿದ್ದವು. ಕಚೇರಿಯ ಲ್ಯಾಂಡ್ಲೈನ್ ನಂಬರ್ಗೆ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿದ್ದರು. ಕರೆಯಲ್ಲಿ ಹಣಕ್ಕೆ ಬೇಡಿಕೆಯಿಟ್ಟಿರುವುದು ಮಾತ್ರವಲ್ಲದೆ ಕೊಲೆ ಬೆದರಿಕೆಯನ್ನೂ ಹಾಕಲಾಗಿತ್ತು. ವಿಷಯ ತಿಳಿದ ತಕ್ಷಣವೇ ನಾಗ್ಪುರ ಪೊಲೀಸರು ಸಚಿವ ನಿತಿನ್ ಗಡ್ಕರಿ ಕಚೇರಿಗೆ ಭದ್ರತೆ ಹೆಚ್ಚಿಸಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧ ಹಿಂಡಲಗಾ ಜೈಲಿನಲ್ಲಿದ್ದ ಕೈದಿ ಜಯೇಶ್ ಪೂಜಾರಿ ಬಳಿಯ ಡೈರಿಯನ್ನು ಜಪ್ತಿ ಮಾಡಲಾಗಿದೆ.
ಯಶಸ್ವಿಯಾಗಿ ಮೂಡಿಬಂದ ಯುವಜನೋತ್ಸವ:ರಾಷ್ಟ್ರೀಯ ಯುವಜನೋತ್ಸವ ಪ್ರಪ್ರಥಮ ಬಾರಿಗೆ ಉತ್ತರ ಕರ್ನಾಟಕದ ಭಾಗದಲ್ಲಿ ನಡೆಯುತ್ತಿದೆ. ಹುಬ್ಬಳ್ಳಿ ರೈಲ್ವೆ ಮೈದಾನಕ್ಕೆ ಪ್ರಧಾನಿ ಮೋದಿ ಜನವರಿ 12 ಗುರುವಾರ ರೋಡ್ ಶೋ ಮೂಲಕ ತೆರಳಿ, ಯುವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಇಂದು ಕಾರ್ಯಕ್ರಮದ ಕೊನೆಯ ದಿನವಾಗಿದ್ದು, ಸಮಾರೋಪ ಸಮಾರಂಭ ಧಾರವಾಡದ ಕೆಸಿಡಿ ಮೈದಾನದಲ್ಲಿ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಗಮಿಸಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಅನುರಾಗ್ ಸಿಂಗ್ ಠಾಕೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ.
ಇದನ್ನೂ ಓದಿ:ಅರಮನೆ ಮೈದಾನದಲ್ಲಿ ನಾ ನಾಯಕಿ ಸಮಾವೇಶ... ಬೆಂಗಳೂರಿಗೆ ಇಂದು ಪ್ರಿಯಾಂಕಾ ಗಾಂಧಿ