ಹುಬ್ಬಳ್ಳಿ: ಮಹಾದಾಯಿ ಮತ್ತು ಕಳಸಾ ಬಂಡೂರಿ ಯೋಜನೆಗೆ ಸಂಬಂಧ ಪಟ ಬಗ್ಗೆ ಕಾಂಗ್ರೆಸ್‌ಗೆ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯಿಲ್ಲ, ಇನ್ನು ಮೂರು ತಿಂಗಳಲ್ಲಿ ಚುನಾವಣೆ ಇದೆ. ಅದಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಚುನಾವಣೆ ಪ್ರಚಾರಕ್ಕಾಗಿ ಮಹಾದಾಯಿ ಹೋರಾಟ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮಹದಾಯಿ ಬಗ್ಗೆ ಒಂದು ಶಬ್ದವನ್ನೂ ಮಾತಾಡಿಲ್ಲ. ಎಲ್ಲಿ ಮಾತಾಡಬೇಕು ಅಲ್ಲಿ ಮಾತಾಡೋದು ಬಿಟ್ಟು, ಈಗ ಇಲ್ಲಿ ಬಂದು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಇಂದು ಮಾಧ್ಯಮದ ಜೊತೆಗೆ ಮಾತನಾಡಿದ ಜಗದೀಶ್ ಶೆಟ್ಟರ್, ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದರು. ಆ ಸಮಯದಲ್ಲಿ ಕಳಸಾ ಬಂಡೂರಿ ಬಗ್ಗೆ ಒಂದು ಬಾರಿ ವಿಷಯ ಮಾತನಾಡಲಿಲ್ಲ, ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಗೋವಾ ರಾಜ್ಯ ಚುನಾವಣೆ ಸಂದರ್ಭದಲ್ಲಿ ಬಹಿರಂಗವಾಗಿ ಕರ್ನಾಟಕಕ್ಕೆ ಮಾಂಡೊವಿ ನದಿಯಿಂದ ಒಂದು ಹನಿ ನೀರು ಕೊಡುವುದಿಲ್ಲ ಎಂದು ಹೇಳಿದ್ದರು.
ಸೋನಿಯಾ ಗಾಂಧಿ ಮಾತು ಮೀರಿ ಅವರ ವಿರುದ್ಧ ಹೋರಾಡ್ತೀರಾ..? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರು ಕರ್ನಾಟಕದ ಹಿತಾಸಕ್ತಿಯ ಬಗ್ಗೆ ಒಮ್ಮೆಯೂ ಹೋರಾಡಿಲ್ಲ. ಯಮನೂರಿನಲ್ಲಿ ನಡೆದ ಮಹದಾಯಿ ಹೋರಾಟದ ಸಂದರ್ಭದಲ್ಲಿ ಹೋರಾಟಗಾರರು ಮತ್ತು ರೈತರ ಮೇಲೆ ಲಾಠಿಚಾರ್ಜ್ ಮಾಡಿಸಿದ್ದರು. ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ನೀರಾವರಿ ಯೋಜನೆ ಜಾರಿ ಮಾಡುತ್ತೇವೆ ಎಂದಿದ್ದಾರೆ ಸಿದ್ದರಾಮಯ್ಯ. ‘ಯಾವನರಿ ಇವಾ..?’ ಎಂದು ಸಿದ್ದರಾಮಯ್ಯ ವಿರುದ್ಧ ಜಗದೀಶ್ ಶೆಟ್ಟರ್ ಟೀಕಿಸಿದರು.