ಹುಬ್ಬಳ್ಳಿ:ಸುಮ್ಮನೆ ಆರೋಪ ಮಾಡೋದು, ಪ್ರಚಾರ ತೆಗೆದುಕೊಳ್ಳುವುದನ್ನು ಬಿಟ್ಟರೆ ಇದರ ಹಿಂದೆ ಏನೂ ಇಲ್ಲ. ನೂರಕ್ಕೆ ನೂರು ಇದು ಆಧಾರ ರಹಿತ ಆರೋಪ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಆ ರೀತಿ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಿವಿಮಾತು ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಶಶಿ ತರೂರ್ ಸಭೆಯಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಟಾಂಗ್ ನೀಡಿ, ಶಶಿ ತರೂರ್ ಸಭೆಯಲ್ಲಿ ನಡೆದ ಚರ್ಚೆ ಬಗ್ಗೆ ಕೇಂದ್ರ ಸಚಿವರಿಗೆ ಕನಸು ಬಿದ್ದಿತ್ತಾ? ಅವರಿಗೇನು ಅಂತರಾತ್ಮ ಇದೆಯಾ? ದೃತರಾಷ್ಟ್ರನಿಗೆ ಸಂಜಯ ಹೇಳಿದಂತೆ ಜೋಶಿ ಅವರಿಗೆ ಹೇಳುವ ಯಾವುದಾದರೂ ಶಕ್ತಿ ಇದೆಯಾ ಎಂದು ಪ್ರಶ್ನೆ ಮಾಡಿದರು.
ಒಂದು ಸಾವಿರ ಕೋಟಿ ಕಲೆಕ್ಟ್ ಮಾಡಿ ತೆಲಂಗಾಣಕ್ಕೆ ರಾಜ್ಯ ಕಾಂಗ್ರೆಸ್ ನೀಡುತ್ತೆ ಅಂತ ಜೋಶಿ ಆರೋಪ ಮಾಡಿದ್ದರು. ಈಗ ಅದಕ್ಕೆ ಅವರು ಏನು ಉತ್ತರ ನೀಡುತ್ತಾರೆ. ಅವರು ಸುಮ್ಮನೆ ಆರೋಪ ಮಾಡುತ್ತಾರೆ. ಬೆಂಗಳೂರಿನಲ್ಲಿ ಸಿಕ್ಕ ಹಣ ಕಾಂಗ್ರೆಸ್ ಪಾರ್ಟಿಗೆ ಸೇರಿದ್ದು ಅಂತ ಜೋಶಿ ಆರೋಪ ಮಾಡಿದ್ದರು. ಕೇಂದ್ರ ಸರ್ಕಾರದ ಬಳಿ ಐಟಿ, ಇಡಿ, ಸಿಬಿಐ ಇದೆ. ಅದನ್ನು ತನಿಖೆ ಮಾಡಿ ಅದು ಯಾರ ಹಣ, ಅದು ಯಾರ ಮನೆ ಎನ್ನುವ ಮಾಹಿತಿ ಹೊರಗೆ ತರಲಿ. ದಾಳಿ ಆದಾಗ ಮಾತ್ರ ದೊಡ್ಡಕ್ಕೆ ಸುದ್ದಿಯಾಗುತ್ತದೆ. ನಂತರ ಏನಾಯ್ತು ಎನ್ನುವುದರ ಬಗ್ಗೆ ಸುದ್ದಿಯೇ ಇರುವುದಿಲ್ಲ ಎಂದು ಟಾಂಗ್ ಕೊಟ್ಟರು.