ಹುಬ್ಬಳ್ಳಿ: ಜನಪ್ರತಿನಿಧಿಗಳು ಇನ್ನೊಬ್ಬರಿಗೆ ಮಾದರಿಯಾಗಿರಬೇಕು. ಯಾರೇ ತಪ್ಪು ಮಾಡಿದರು ಅದು ಸರಿಯಲ್ಲ. ಸಾರ್ವಜನಿಕರ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ಮೊದಲು ನಾಯಕರು ವಿಚಾರ ಮಾಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಸಮಾಧಾನ ಹೊರ ಹಾಕಿದರು.
ನಗರದಲ್ಲಿಂದು ತಿಪ್ಪಾರೆಡ್ಡಿ ಆಡಿಯೋ ಪ್ರಕರಣಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಶಾಸಕರಾದವರು, ಮಂತ್ರಿಯಾದವರು ಈ ರೀತಿ ಮಾಡೋದು ಸರಿಯಲ್ಲ. ಸಾಮಾನ್ಯ ಜನರು ಈ ರೀತಿ ಮಾಡುವುದಿಲ್ಲ, ಪ್ರಮಾಣಿಕವಾಗಿ ಹೇಳುವುದಾದರೆ ಈ ತರಹದ ವಿಚಾರ ನನಗೆ ಎಳ್ಳಷ್ಟು ಒಪ್ಪಿಗೆಯಾಗಿಲ್ಲ. ಜನಪ್ರತಿನಿಧಿಗಳೇ ಈ ರೀತಿ ಕಚ್ಚಾಡಿದರೆ ಹೇಗೆ ಶಾಸಕರು ಹೇಳಿದಾಗ ಮಂತ್ರಿಯಾದವರು ಒಂದಷ್ಟು ತಡೆದುಕೊಳ್ಳಬೇಕು.
ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಮಾದರಿಯಾಗಿರಬೇಕು ಸಿಡಿ ಇತ್ಯಾದಿ ಮಾಡ್ತೀನಿ ಅಂತಾರೆ, ಏನಿದರ ಅರ್ಥ. ಈ ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಮೊದಲೆಲ್ಲ ರಾಜಕೀಯದಲ್ಲಿ ಈ ರೀತಿ ಇರಲಿಲ್ಲ, ಇತ್ತೀಚಿಗೆ ಹೆಚ್ಚಾಗಿದೆ, ಮಾದರಿಯಾದಂತಹ ಜನರು ಮಾದರಿಯಾಗಿರಬೇಕು ಇದರಿಂದ ವೋಟ್ ಹಾಕಿ ಗೆಲ್ಲಿಸಿದಂತಹ ಸಾರ್ವಜನಿಕರ ಮೇಲೆ ಪರಿಣಾಮ ಬೀಳುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲ ಸರ್ಕಾರದಲ್ಲೂ ಸಿಡಿ ರಾಜಕಾರಣಗಳಿದ್ದವು. ಆದರೆ, ಈ ಸರ್ಕಾರದಲ್ಲಿ ಅದು ಹೆಚ್ಚಾಗಿದೆ. ಶಿಸ್ತು ಇಲ್ಲ ಎಂದರೆ ಹೀಗಾಗುತ್ತೆ, ಬಿಜೆಪಿಗೆ ಪಕ್ಷಾಂತರ ಮಾಡಿದ್ದಕ್ಕೆ ನನಗೇನು ಬೇಸರವಿಲ್ಲ. ಶಿಕ್ಷಕರು ಮತ್ತು ಇತರರು ಒತ್ತಾಯ ಮಾಡಿದ್ದರ ಮೇರೆಗೆ ಬಿಜೆಪಿ ಸೇರಿದ್ದೇನೆ. ಜೆಡಿಎಸ್ ಮುಖಂಡರ ಮನವೊಲಿಕೆ ಮಾಡಿಯೇ ನಾನು ಬಿಜೆಪಿಗೆ ಹೋಗಿದ್ದೇನೆ. ಸಭಾಪತಿ ಆಗಿರೋದರಿಂದ ನಾನು ಯಾರ ಮೇಲೂ ಕೆಸರು ಎರಚೋಕೆ ಹೋಗಿಲ್ಲ ಎಂದು ಹೇಳಿದರು.