ಹುಬ್ಬಳ್ಳಿ:ಕೆರೆಯಲ್ಲಿಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಕಾರಣ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮಸ್ಥರು ಕೆರೆ ನೀರು ಕುಡಿಯಲು ಜನರು ಹಿಂದೇಟು ಹಾಕಿದ್ದರು. ಹೀಗಾಗಿ ಗ್ರಾಮಸ್ಥರ ಪಟ್ಟಿಗೆ ಮಣಿದ ಜಿಲ್ಲಾಡಳಿತ ಕೆರೆಯ ನೀರನ್ನು ಪಂಪಸೆಟ್ಗಳ ಮುಖಾಂತರ ಕೆರೆ ನೀರನ್ನು ಹೊರ ಹಾಕಲಾಗುತ್ತಿದೆ. ಆದರೆ, ಈಗ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಎರಡು ಕೊಡ ನೀರಿಗಾಗಿ ಇಡೀ ದಿನ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆರೆಯಲ್ಲಿ ಪತ್ತೆಯಾದ ಮೃತದೇಹ ಮೂರ್‍ನಾಲ್ಕು ದಿನಗಳ ಕಾಲ ಕೆರೆಯಲಿದ್ದು, ಮೀನು ಇತರ ಕೀಟಗಳು ದೇಹವನ್ನು ಸಂಪೂರ್ಣ ಕಚ್ಚಿದ್ದವು. ಹೀಗಾಗಿ ಇಂತಹ ನೀರನ್ನು ಕುಡಿಯಲು ಸಾಧ್ಯವಿಲ್ಲ. ಹೀಗಾಗಿ ಕೆರೆಯ ನೀರನ್ನು ಹೊರಕ್ಕೆ ಹರಿಸುವಂತೆ ಗ್ರಾಮಸ್ಥರು ಪಟ್ಟುಹಿಡಿದಿದ್ದರು. ಆದರೆ, ಮುಂದೆ ಮಳೆ ಸಮಸ್ಯೆಯಾದರೆ ಇರುವ ಇತರ ಬಳಕೆ, ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾದರೆ ಮತ್ತೂಂದು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಗ್ರಾಮಸ್ಥರ ಮನವೋಲಿಸಲು ಪ್ರಯತ್ನ ಪಟ್ಟರಾದರು.
ಮುಂದೆ ಚೆನ್ನಾಗಿ ಮಳೆಯಾಗುತ್ತದೆ ಈ ನೀರನ್ನು ಹೊರ ಹಾಕದೇ ಹೊರತು ನಾವು ಈ ಕೆರೆ ನೀರನ್ನು ಕುಡಿಯಲು ಬಳಸಲ್ಲ. ಅಲ್ಲಿಯವರೆಗೆ ಟ್ಯಾಂಕರ್ ನೀರು ಪೂರೈಸಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಹೇಳಿದ್ದಾರೆ.
ಕೆರೆಯಲ್ಲಿ ಮೃತದೇಹ ದೊರೆತ ಮಾರನೇ ದಿನವೇ ಕೆರೆ ನೀರಿನ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆದರೆ, ನೀರಿನಲ್ಲಿ ಯಾವುದೇ ಹಾನಿಕಾರಕ ಅಂಶ ಅಥವಾ ಕುಡಿಯಲು ಯೋಗ್ಯವಲ್ಲದ ಬ್ಯಾಕ್ಟಿರಿಯಾಗಳು ಇಲ್ಲ ಎಂದು ಪ್ರಯೋಗಾಲಯ ವರದಿ ಬಂದಿದೆ. ಪುನಃ ಮತ್ತೊಮ್ಮೆ ನೀರು ಪರೀಕ್ಷೆ ಮಾಡಿಸಿದಾಗಲೂ ಅದೇ ಫಲಿತಾಂಶ ಬಂದಿದೆ. ಅಲ್ಲದೆ ವೈಜ್ಞಾನಿಕವಾಗಿ ವೈದ್ಯರು ಹಾಗೂ ತಂತ್ರಜ್ಞರ ಸಮಕ್ಷಮದಲ್ಲಿ ಔಷಧಿ ಸಿಂಪರಣೆ ನಿರ್ವಹಿಸಲಾಗಿದೆ.