ಹುಬ್ಬಳ್ಳಿ :ಇಂದು ರಾಜ್ಯಕ್ಕೆ 'ಬ್ಲ್ಯಾಕ್ ಫಂಗಸ್' ಚಿಕಿತ್ಸೆಗೆ ಬೇಕಾದ ಔಷಧ ಬಂದಿದ್ದು, ಎಲ್ಲಾ ಆಸ್ಪತ್ರೆಗಳಿಗೆ ತಲುಪಿಸಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.
ನಗರದಲ್ಲಿಂದು ಕೋವಿಡ್ ಸಭೆ ಬಳಿಕ ಮಾತನಾಡಿದ ಅವರು, ಕೇಂದ್ರದಿಂದ 1460 ವಯಲ್ ಔಷಧ ಬಂದಿದೆ. ಸಂಜೆಯೊಳಗೆ ಹುಬ್ಬಳ್ಳಿ ಕಿಮ್ಸ್ಗೆ ಔಷಧ ಪೂರೈಕೆ ಆಗುತ್ತೆ. ಕಿಮ್ಸ್ ಆಸ್ಪತ್ರೆಯಲ್ಲಿ 68 ಜನ ಬ್ಲ್ಯಾಕ್ ಫಂಗಸ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ 12 ಜಿಲ್ಲೆಯಿಂದ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಮನೆಯಲ್ಲಿ ಒಬ್ಬರಿಗೆ ಕೋವಿಡ್ ಬಂದರೆ, ಮನೆಯವರಿಗೆಲ್ಲ ಕೊರೊನಾ ಬರುತ್ತೆ. ಯಾಕಂದ್ರೆ ಮನೆಯಲ್ಲಿ ಸೂಕ್ತ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ಎಲ್ಲರನ್ನೂ ಆಸ್ಪತ್ರೆಗೆ ಅಡ್ಮಿಟ್ ಮಾಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೋವಿಡ್ ಸಂಬಂಧಿತ ಎಲ್ಲ ಪ್ರಕರಣಗಳ ರೋಗಿಗಳನ್ನು ಕೋವಿಡ್ ಕೇರ್ ಸೆಂಟರಿಗೆ ಸೇರಿಸಿ, ಹೊಸ ಪ್ರಕರಣಗಳನ್ನ ಸಹ ಕೇರ್ ಸೆಂಟರ್ ಅಡ್ಮಿಟ್ ಮಾಡಿಸಿ. ಇಲ್ಲದಿದ್ರೆ ಆಸ್ಪತ್ರೆಗೆ ಅವರನ್ನ ಸೇರಿಸುವ ಪ್ರಯತ್ನ ಮಾಡಿ. ಕೋವಿಡ್ ಕೇರ್ ಸೆಂಟರ್ನಲ್ಲಿ ಹೆಚ್ಚಿನ ಕೇರ್ ತೆಗೆದುಕೊಳ್ಳುವಂತೆ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲರಿಗೆ ಸಚಿವರು ಸೂಚನೆ ನೀಡಿದರು.
ಕೊರೊನಾ ಟೆಸ್ಟಿಂಗ್ ತುಂಬಾ ಡಿಲೇ ಆಗುತ್ತಿದೆ ಎಂಬ ಆರೋಪವಿದೆ. ಕೇವಲ 3 ಲ್ಯಾಬ್ ಇರುವುದನ್ನ ಬಿಟ್ಟು ಹೆಚ್ಚಿನ ಲ್ಯಾಬ್ ವ್ಯವಸ್ಥೆ ಮಾಡಿ, ಹೆಚ್ಚು-ಹೆಚ್ಚು ಪರೀಕ್ಷೆಗಳನ್ನು ಮಾಡಿ. ದಿನಕ್ಕೆ 6 ಸಾವಿರ ಟೆಸ್ಟಿಂಗ್ ಮಾಡುವ ವ್ಯವಸ್ಥೆ ಇದ್ದರೂ ಸಹ ಯಾಕೆ ಅಷ್ಟೊಂದು ಆಗುತ್ತಿಲ್ಲ. ಆದಷ್ಟು ಬೇಗ ಟೆಸ್ಟ್ ಮಾಡಿಸಿ, ಟೆಸ್ಟಿಂಗ್ ರಿಪೋರ್ಟ್ ಸಹ ತ್ವರಿತವಾಗಿ ಬರುವಂತೆ ಮಾಡಬೇಕು ಎಂದು ಸೂಚನೆ ನೀಡಿದರು.