ಹುಬ್ಬಳ್ಳಿ: ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಯಾವುದೇ ವಿಳಂಬ ಮಾಡದೇ ಶೀಘ್ರ ಪರಿಹಾರ ವಿತರಣೆಗೆ ಮುಂದಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಈ ಹಿಂದೆ ಪ್ರವಾಹ ಬಂದ ಸಂದರ್ಭ ಪರಿಹಾರ ವಿತರಣೆ ವಿಳಂಬವಾಗುತ್ತಿತ್ತು. ಆದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಯಾವುದೇ ವಿಳಂಬ ಮಾಡದೇ ಶೀಘ್ರ ಪರಿಹಾರ ವಿತರಣೆಗೆ ಮುಂದಾಗಿದೆ ಎಂದರು.
ಯಡಿಯೂರಪ್ಪ ಒನ್ ಮ್ಯಾನ್ ಶೋ ನಡೆಸಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಳೆ ಕಡಿಮೆಯಾಗಿ ಪ್ರವಾಹ ನಿಂತ ಮೇಲೆ ಈಗ ದಿನೇಶ್ ಗುಂಡೂರಾವ್ ಟೂರ್ಗೆ ಬಂದಿದ್ದಾರೆ. ಕಾಟಾಚಾರವೆಂಬಂತೆ ಉತ್ತರ ಕರ್ನಾಟಕಕ್ಕೆ ಟೂರ್ಗೆ ಬಂದು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೆರೆ ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಿಸಿದರು. ಇಂತಹ ವಿಷಯದಲ್ಲೂ ಈ ರೀತಿ ರಾಜಕೀಯ ಮಾಡುವುದು ಗುಂಡೂರಾವ್ಗೆ ಶೋಭೆ ತರುವುದಿಲ್ಲ. ಕಾಂಗ್ರೆಸ್ ಪಕ್ಷದಿಂದ ನೆರೆ ಸಂತ್ರಸ್ತರಿಗೆ ಏನು ಸಹಾಯ ಮಾಡಿದ್ದಾರೆ ಎಂಬುದನ್ನು ತಿಳಿಸಲಿ. ಈ ರೀತಿ ಮಾತನಾಡುವುದನ್ನು ಬಿಟ್ಟು ಸಂತ್ರಸ್ತರಿಗೆ ಸಹಾಯ ಮಾಡುವ ಕೆಲಸ ಮಾಡಲಿ ಎಂದು ಅವರು ಹೇಳಿದರು.
ಸಚಿವ ಸಂಪುಟ ರಚನೆಯಾಗದಿದ್ದರೂ ಯಾವ ಕೆಲಸಗಳೂ ನಿಂತಿಲ್ಲ. ಪ್ರವಾಹಪೀಡಿತ ಸಂತ್ರಸ್ತರಿಗೆ ಯಡಿಯೂರಪ್ಪ ಸಹಾಯ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಯಡಿಯೂರಪ್ಪ ಅನುಯಾಯಿಗಳು ವರ್ಗಾವಣೆ ಧಂದೆ ನಡೆಸುತ್ತಿದ್ದಾರೆಂಬ ಹೇಳಿಕೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ಮೈತ್ರಿ ಸರ್ಕಾರ ಆಡಳಿತದಲ್ಲಿದ್ದಾಗ ಕುಮಾರಸ್ವಾಮಿಯವರು ಎಷ್ಟೋ ಜನರ ವರ್ಗಾವಣೆ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಪರಿಹಾರದ ಚೆಕ್ ವಿತರಣೆ:ಕಳೆದ ಒಂದು ವಾರದಿಂದ ಧಾರಾಕಾರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಹು-ಧಾ ಸೆಂಟ್ರಲ್ ಕ್ಷೇತ್ರದ ನೆರೆ ಸಂತ್ರಸ್ತರಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪರಿಹಾರದ ಚೆಕ್ ವಿತರಿಸಿದರು.
ಕ್ಷೇತ್ರವ್ಯಾಪ್ತಿಯ ನೂರಾರು ಜನರಿಗೆ ಕೇಶ್ವಾಪುರದ ತಮ್ಮ ನಿವಾಸದಲ್ಲಿ ಚೆಕ್ ವಿತರಿಸಿ ಸಾಂತ್ವನ ಹೇಳಿದರು. ಸೆಂಟ್ರಲ್ ಕ್ಷೇತ್ರದ 400ಕ್ಕೂ ಹೆಚ್ಚು ಜನ ಸಂತ್ರಸ್ತರಿಗೆ ಪರಿಹಾರ ವಿತರಣೆ ಮಾಡಲಾಯಿತು. ₹ 50 - 60 ಲಕ್ಷಕ್ಕೂ ಹೆಚ್ಚು ಪರಿಹಾರದ ಚೆಕ್ ವಿತರಣೆ ಸಂದರ್ಭದಲ್ಲಿ ನೆರೆ ಸಂತ್ರಸ್ತರು ಸಾಲಾಗಿ ನಿಂತು ಪರಿಹಾರದ ಚೆಕ್ ಪಡೆದುಕೊಂಡರು.