ಹುಬ್ಬಳ್ಳಿ: ಭಾರತೀಯ ರೈಲ್ವೆಗೆ ತನ್ನದೇಯಾದ ರೋಚಕ ಐತಿಯಾಸಿಕ ಹಿನ್ನೆಲೆ ಇದೆ. ಭಾರತದಲ್ಲಿ ರೈಲ್ವೆ ಬೆಳೆದುಬಂದ ಬಗೆಯನ್ನು ನೈರುತ್ಯ ರೈಲ್ವೆ ವಲಯ ಒಂದೆಡೆ ತೆರೆದಿಡುವ ಕೆಲಸ ಮಾಡಿದೆ.
ನಗರದ ಗದಗ ರಸ್ತೆಯಲ್ಲಿ ನಿರ್ಮಿಸಲಾಗಿರುವ ರೈಲ್ವೆ ಮ್ಯೂಸಿಯಂ ರೈಲಿನ ಐತಿಹಾಸಿಕ ಪರಂಪರೆಯನ್ನು ಸಾರಿ ಹೇಳುತ್ತಿದೆ. ಭಾರತೀಯ ರೈಲ್ವೆ ಇಲಾಖೆಯ ಇತಿಹಾಸದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸದುದ್ದೇಶದಿಂದ ಗದಗ ರಸ್ತೆಯ ರೈಲ್ವೆ ನಿಲ್ದಾಣದ ಎರಡನೇ ಗೇಟ್ ಪಕ್ಕ ಸುಮಾರು 3,500 ಚದರ್ ಮೀಟರ್ ವ್ಯಾಪ್ತಿಯಲ್ಲಿ ನೈರುತ್ಯ ರೈಲ್ವೆ ವಲಯ ಮ್ಯೂಸಿಯಂ ನಿರ್ಮಿಸುತ್ತಿದೆ.
ರೈಲ್ವೆ ಇತಿಹಾಸ ಸಾರುವ ಮ್ಯೂಸಿಯಂ ಮೈಸೂರಿನಲ್ಲೂ ಒಂದಿದೆ. ಇದೀಗ ಆರಂಭವಾಗಲಿರುವ ಮ್ಯೂಸಿಯಂ ರಾಜ್ಯದ ಪಾಲಿಗೆ ಎರಡನೇ ಮ್ಯೂಸಿಯಂ ಆಗಿದೆ.
ಹುಬ್ಬಳ್ಳಿಯಲ್ಲಿ ತಲೆಎತ್ತಲಿದೆ ರಾಜ್ಯದ ಎರಡನೇ ರೈಲ್ವೆ ಮ್ಯೂಸಿಯಂ ಮ್ಯೂಸಿಯಂನಲ್ಲಿ ಏನಿದೆ: 1907ರಲ್ಲಿ ಬ್ರಿಟಿಷ್ ಅಧಿಕಾರಿಗಳು ತಂಗುವುದಕ್ಕಾಗಿ ನಿರ್ಮಿಸಿದ್ದ 3 ಕಟ್ಟಡಗಳನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ರೈಲಿನ ಇತಿಹಾಸವನ್ನು ವಿವಿಧ ರೂಪಗಳಲ್ಲಿ ಈ ವಸ್ತು ಸಂಗ್ರಹಾಲಯ ತೆರೆದಿಟ್ಟಿದೆ. ರೈಲು ಆರಂಭವಾದಾಗಿನಿಂದ ಇಲ್ಲಿಯವರೆಗೂ ಆಗಿರುವ ಬದಲಾವಣೆಗಳು, ತಂತ್ರಜ್ಞಾನದ ಜೊತೆ ರೈಲ್ವೆ ವಿಭಾಗವೂ ಬೆಳೆದು ಬಂದ ಬಗೆ, ವಿವಿಧ ರೀತಿಯ ರೈಲುಗಳು, ಬೋಗಿಗಳು, ಹಳೆಯ ಕಾಲದ ಸಿಗ್ನಲ್‌ಗಳು, ವಿದ್ಯುತ್ ಉಪಕರಣಗಳು, ಪ್ರಸ್ತುತ ರೈಲ್ವೆ ಮಾದರಿಗಳು, ಹೊಸ ತಂತ್ರಜ್ಞಾನಗಳು, ಹಂತ ಹಂತದ ಬೆಳವಣಿಗೆಗಳು, ರೈಲಿನ ಹಿನ್ನೆಲೆ ತಿಳಿಸುವ ಪುಸ್ತಕ, ಛಾಯಾಚಿತ್ರಗಳೂ ಇವೆ.
ನ್ಯಾರೋಗೇಜ್ನ 2 ಡೀಸೆಲ್ ಇಂಜಿನ್ ಬೋಗಿಗಳು, ಒಂದು ಪ್ರಯಾಣಿಕರ ಬೋಗಿ, ಗೂಡ್ಸ್ ಬೋಗಿ, ಬ್ರಾಡ್ ಗೇಜ್ನ 2 ಎಸಿ ಬೋಗಿಗಳನ್ನು ಇಲ್ಲಿಡಲಾಗಿದೆ. ಬ್ರಾಡ್ ಗೇಜ್ನ ಒಂದು ಬೋಗಿಯನ್ನು ರೆಸ್ಟೋರೆಂಟ್ ಆಗಿ ಪರಿವರ್ತಿಸಲಾಗಿದೆ. ಮ್ಯೂಸಿಯಂ ವೀಕ್ಷಣೆಗೆ ಬಂದವರು ಇಲ್ಲಿ ಉಪಹಾರ ಸೇವಿಸಬಹುದು.
ರೈಲ್ವೆ ಮ್ಯೂಸಿಯಂನಲ್ಲಿ ಇಡಲಾದ ಬೋಗಿಗಳು ಇನ್ನೊಂದು ಬೋಗಿಯನ್ನು ಥಿಯೇಟರ್ ಆಗಿ ಬದಲಾಯಿಸಲಾಗಿದ್ದು, ಇದರಲ್ಲಿ ರೈಲ್ವೆ ಪರಂಪರೆ ಸಾರುವ ವಿಡಿಯೋ ಚಿತ್ರಗಳನ್ನು ವೀಕ್ಷಿಸಬಹುದು. ಸಾರ್ವಜನಿಕ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಭಾರತೀಯ ರೈಲ್ವೆ ಇಲಾಖೆಯ ಎಲ್ಲ ರೀತಿಯ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವ ಸದುದ್ದೇಶದಿಂದ ನೈರುತ್ಯ ರೈಲ್ವೆ ಇಲಾಖೆ ಮ್ಯೂಸಿಯಂ ಸಿದ್ಧಪಡಿಸಿದ್ದು, ಉತ್ತಮ ಕಾರ್ಯನಿರ್ವಹಣೆಯಿಂದ ಜನರನ್ನು ತನ್ನತ್ತ ಸೆಳೆಯುತ್ತಿದೆ.