ಹುಬ್ಬಳ್ಳಿ:ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಈ ರೀತಿ ವೀಡಿಯೋ ಬಿಡುಗಡೆ ಮಾಡಿ ಪೊಲೀಸರ ಮೇಲೆ ಆಪಾದನೆ ಮಾಡುವುದು ಸರಿಯಲ್ಲ. ಕುಮಾರಸ್ವಾಮಿಯವರು ಈ ರೀತಿ ಮಾಡಿದ್ರೆ ಪೊಲೀಸರ ನೈತಿಕತೆಯನ್ನ ಪ್ರಶ್ನೆ ಮಾಡಿದಂತಾಗುತ್ತದೆ ಎಂದು ಸಚಿವ ಜಗದೀಶ್ ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಗಲಭೆ ವಿಚಾರವಾಗಿ ಗೃಹ ಸಚಿವರು ಕ್ರಮ ಕೈಗೊಳ್ಳಲಿದ್ದಾರೆ. ಮಂಗಳೂರಿನ ಘಟನೆಯನ್ನ ಕುಮಾರಸ್ವಾಮಿಯವರು ರಾಜಕೀಯ ಮಾಡುವುದು ಸರಿಯಲ್ಲ. ಆ ಘಟನೆ ಬಗ್ಗೆ ಕಾನೂನು ರೀತಿಯ ಕ್ರಮ ಆಗಲಿದೆ ಎಂದರು.
ಮಹದಾಯಿ ಸಮಸ್ಯೆ ಇತ್ಯರ್ಥ ವಿಚಾರವಾಗಿ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ಮೇಲೆ ಆರೋಪ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರು ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಎಲ್ಲಾ ಪಕ್ಷದ ಮುಖಂಡರು ಈ ವಿಚಾರದಲ್ಲಿ ಸಕಾರಾತ್ಮಕವಾಗಿ ನಡೆದುಕೊಂಡರೆ ಇತ್ಯರ್ಥವಾಗಲಿದೆ ಎಂದರು.
ಈ ಹಿಂದೆ ಐದು ವರ್ಷಗಳ ಕಾಲ ನೀವು ಸಿಎಂ ಆಗಿದ್ದಾಗ ಕೇವಲ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಹೋರಾಟ ಮಾಡಿದ್ರಿ. ಮಹದಾಯಿ ವಿಚಾರವಾಗಿ ಈ ಹಿಂದೆ ಸಿಎಂ ಆಗಿದ್ದಾಗಲೇ ಸಿದ್ದರಾಮಯ್ಯ ಅವರು ಹತ್ತಾರು ಬಾರಿ ರಾಜ್ಯ ಬಂದ್ ಮಾಡಿಸಿದ್ರು. ಇಂತಹ ಹೇಳಿಕೆಗಳನ್ನೆಲ್ಲ ಬಿಟ್ಟು ಮಹದಾಯಿ ಸಮಸ್ಯೆ ಇತ್ಯರ್ಥದ ಬಗ್ಗೆ ವಿಚಾರ ಮಾಡಲಿ ಎಂದು ತಿರುಗೇಟು ನೀಡಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಅವರು ಈ ಬಗ್ಗೆ ಕೇಂದ್ರ ನಾಯಕರ ಜೊತೆ ಮಾತನಾಡಿ ನಿರ್ಧಾರ ಕೈಗೊಳ್ಳಲಿದ್ದಾರೆ. ಲಿಂಗಾಯತ ಸಚಿವರನ್ನ ಸಂಪುಟದಿಂದ ಕೈಬಿಡುವುದು ಆಧಾರ ರಹಿತ ಸುದ್ದಿ. ಊಹಾಪೋಹಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದರು.