ಹುಬ್ಬಳ್ಳಿ:ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಪೂರ್ಣ ಸ್ಮಾರ್ಟ್ ಸಿಟಿ ಯೋಜನೆಯಡಿ ಇನ್ನೂ ಸ್ಮಾರ್ಟ್ ಆಗುತ್ತಿದೆ. ಒಂದು ಕಡೆ ರಸ್ತೆ ಹಾಗೂ ಒಳಚರಂಡಿ ನಿರ್ಮಾಣಕ್ಕೆ ನೂರು ಕೋಟಿ ಖರ್ಚು ಮಾಡಲಾಗುತ್ತಿದ್ದರೆ, ಮತ್ತೊಂದೆಡೆ ದಶಕಗಳಿಂದ ಕೆಲ ರಸ್ತೆಗಳು ಕಾಯಕಲ್ಪಕ್ಕಾಗಿ ಕಾಯುತ್ತಿವೆ.
ಇದನ್ನೂ ಓದಿ...ಡಿಜೆ ಹಚ್ಚಂಗಿಲ್ಲ..ಡ್ಯಾನ್ಸ್ ಮಾಡಂಗಿಲ್ಲ.. ಹುಬ್ಬಳ್ಳಿಯಲ್ಲಿ ಸಿಂಪಲ್ ನ್ಯೂ ಇಯರ್
ರಸ್ತೆಗಳ ಅಭಿವೃದ್ಧಿಗೆಂದೇ ರಾಜ್ಯ ಸರ್ಕಾರ ಇಂತಿಷ್ಟು ಕೋಟಿಯೆಂದು ಮೀಸಲಿಟ್ಟಿರುತ್ತದೆ. ಆದರೆ, ರಸ್ತೆ ನಿರ್ಮಾಣ, ಡಾಂಬರೀಕರಣ ಹೆಸರಲ್ಲಿ ಪೋಲು ಮಾಡುತ್ತಿದೆ ಎಂಬ ಆರೋಪಗಳಿವೆ. ಕಾಲಕಾಲಕ್ಕೆ ಅನುದಾನ ಬಿಡುಗಡೆಯಾದರೂ ಕಳಪೆ ಕಾಮಗಾರಿಯಿಂದಾಗಿ ರಸ್ತೆಗಳು ಡೇಂಜರ್ ಸ್ಪಾಟ್ಗಳಾಗಿ ಹೊರಹೊಮ್ಮುತ್ತಿವೆ. ಸ್ಮಾರ್ಟ್ ಸಿಟಿ ಕಾಮಗಾರಿ ಬಹುತೇಕ ಮುಗಿಯತ್ತ ಬಂದರೂ ರಸ್ತೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ.
ರಸ್ತೆ ದುರಸ್ತಿಗೆ ಆಗ್ರಹಿಸಿದ ಸ್ಥಳೀಯ ನಿವಾಸಿಗಳು ಪಾಲಿಕೆ ವ್ಯಾಪ್ತಿಯ ಮಂಟೂರು ರಸ್ತೆಯು ಡಾಂಬರು ಕಂಡು ಹಲವು ವರ್ಷಗಳೇ ಕಳೆದಿವೆ. ರಸ್ತೆ ದುರಸ್ತಿಗೆ ಸ್ಥಳೀಯರು ಪಾಲಿಕೆ ಹಾಗೂ ಶಾಸಕರಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಧೂಳಿನಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಮಕ್ಕಳು ಹಾಗೂ ವೃದ್ಧರು ಅಲರ್ಜಿ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ, ಸಿಆರ್ಎಫ್ ಅನುದಾನ ಹೊರತುಪಡಿಸಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಲ್ಲಿ ಸುಮಾರು ₹100 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಕ್ಕೆ ಮಹಾನಗರ ಪಾಲಿಕೆ ಚಿಂತನೆ ನಡೆಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಲ್ಲದೇ, ₹38 ಕೋಟಿ ಪ್ರಸ್ತಾವನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ರಸ್ತೆಗಳ ಅಭಿವೃದ್ಧಿ ವಿಷಯದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಜಾಯಿಷಿ ನೀಡುವ ಬದಲಿಗೆ ಕೂಡಲೇ ರಸ್ತೆ ದುರಸ್ತಿಗೆ ಶ್ರಮಿಸಬೇಕಿದೆ.