ಹುಬ್ಬಳ್ಳಿ:ರೈಲ್ವೆ ಸಾರಿಗೆ ಜನಪ್ರಿಯತೆ ಪಡೆದ ಸೇವೆಯಾಗಿದ್ದು, ಮೊದಲು ಜನರು ರೈಲ್ವೇ ಶಬ್ದವನ್ನು ಕೇಳಿಕೊಂಡು ಸಮಯ ತಿಳಿದುಕೊಳ್ಳುವ ಕಾಲವೊಂದಿತ್ತು. ರೈಲು ಗಾಡಿಯನ್ನು ನೋಡಿ ಹರ್ಷ ವ್ಯಕ್ತಿಪಡಿಸುತ್ತಿದ್ದ ಸಂದರ್ಭ ಗತಿಸಿ ದಶಕಗಳೇ ಉರುಳಿ ಹೋಗಿದ್ದು, ಅಂತಹ ನೆನಪನ್ನು ಮತ್ತೊಮ್ಮೆ ಮರುಕಳಿಸುವಂತೆ ಮಾಡಿದೆ ರಾಣಿ ಚೆನ್ನಮ್ಮ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲು
ರಾಣಿ ಚೆನ್ನಮ್ಮ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲು ಸೇವೆ ಪ್ರಾರಂಭವಾಗಿ, ಇಪ್ಪತ್ತೈದು ವರ್ಷಗಳು ಕಳೆದಿದೆ. ರಾಣಿ ಚೆನ್ನಮ್ಮ ರೈಲಿಗೂ ಹುಬ್ಬಳ್ಳಿಗೂ ಅವಿನಾಭಾವ ಸಂಬಂಧವಿದ್ದು, ಇದು ಕಳೆದ 25 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ಕೊಂಡಿಯಾಗಿದೆ.
ಬೆಳಿಗ್ಗೆ 5.30 ಆದರೆ ಸಾಕು, ವಾಣಿಜ್ಯ ನಗರಿಯ ರೈಲು ನಿಲ್ದಾಣ ಗಿಜಿಗುಡುತ್ತಿರುತ್ತದೆ. ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ನಡೆದು ಬರುವ ಅದೆಷ್ಟೋ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿರುವ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲು ಈಗ 25 ವಸಂತಗಳನ್ನು ಪೂರೈಸಿದೆ.
ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲು ಬೆಳ್ಳಿ ಹಬ್ಬದ ’ಟ್ರ್ಯಾಕ್’ನಲ್ಲಿ ಓಡುತ್ತಿರುವ ಈ ರೈಲು ನೈರುತ್ಯ ರೈಲ್ವೆಯ ’ರಾಣಿ’ಯಾಗಿದೆ. ಇನ್ನೂ ಹಳ್ಳಿಗಳಲ್ಲಿಯ ಜನರು ಮುಂಜಾನೆ ಹೊಲಕ್ಕೆ ಹೋಗಲು ಕೂಡ ರಾಣಿ ಚೆನ್ನಮ್ಮ ರೈಲಿನ ಸಮಯವನ್ನು ಗಮನಿಸುತ್ತಿರುವುದು ಕೂಡ ವಿಶೇಷವಾಗಿದೆ.
ಇದು ಈ ಭಾಗದ ಜನರಿಗೆ ಸಂಪರ್ಕ ಸೇತುವೆಯಷ್ಟೇ ಅಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಮಹಿಳೆಯ ಹೆಸರು ರೈಲಿಗೆ ಇರುವ ಕಾರಣ, ಈ ರೈಲಿನೊಂದಿಗೆ ಭಾವನಾತ್ಮಕ ಬೆಸುಗೆಯಿದೆ. ಮೀಟರ್ ಗೇಜ್‌ನಲ್ಲಿದ್ದ ಈ ರೈಲು ಬಳಿಕ ಬ್ರಾಡ್‌ಗೇಜ್‌ಗೆ ಪರಿವರ್ತನೆಯಾಯಿತು. ಇದಕ್ಕೂ ಮೊದಲು ಕರ್ನಾಟಕ ಎಕ್ಸ್‌ಪ್ರೆಸ್, ಡೆಕ್ಕನ್ ಎಕ್ಸ್‌ಪ್ರೆಸ್ ಮತ್ತು ಕಿತ್ತೂರು ಎಕ್ಸ್‌ಪ್ರೆಸ್ ಎಂದು ಕರೆಯಲಾಗುತ್ತಿತ್ತು.
ಇಪ್ಪತ್ತೈದು ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಿದ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲು, ಇಂದಿಗೂ ರೈಲ್ವೆ ಪ್ರಯಾಣಿಕರ ಜೀವನಾಡಿಯಾಗಿದೆ. ವಿಶ್ವ ಮಹಿಳಾ ದಿನಾಚರಣೆಯಂದೆ ಈ ರೈಲನ್ನು ಮುನ್ನೆಡೆಸುವ ಮೂಲಕ ಹೊಸ ಸಂಪ್ರದಾಯಕ್ಕೆ ಮುನ್ನಡೆ ಹಾಕಿದ್ದನ್ನು ಸ್ಮರಿಸಬಹುದು.