ಧಾರವಾಡ :ಮಾವು ಹಣ್ಣುಗಳ ರಾಜ ಈತನನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ? ಆದ್ರೆ ಈ ಹಣ್ಣು ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಜನರು ಖರೀದಿಸಲು ಹಿಂದೇಟು ಹಾಕೋ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಈ ರಾಜನನ್ನು ಜನಸಾಮಾನ್ಯರವರೆಗೆ ಮುಟ್ಟಿಸೋ ಉದ್ದೇಶದಿಂದ ಧಾರವಾಡದಲ್ಲಿ ಐದು ದಿನಗಳ ಮಾವು ಮೇಳವನ್ನು ಆಯೋಜಿಸಲಾಗಿದೆ.
ಧಾರವಾಡ ಮಾವುಗಳ ಪ್ರದೇಶ ಅಂತಲೇ ಹೆಸರಾಗಿದ್ದು, ಇಲ್ಲಿನ ಬಹುತೇಕ ಪ್ರದೇಶದಲ್ಲಿ ಬಗೆ ಬಗೆಯ ಮಾವಿನ ಹಣ್ಣನ್ನು ಬೆಳೆಯಲಾಗುತ್ತೆ. ಇಂಥ ವಿವಿಧ ಹಣ್ಣುಗಳು ಒಂದೇ ಸೂರಿನಡಿ ಸಿಕ್ಕರೆ ಹೇಗೆ?, ಅದಕ್ಕೆಂದೇ ತೋಟಗಾರಿಕಾ ಇಲಾಖೆ 5 ದಿನಗಳ ಮಾವಿನ ಮೇಳವನ್ನು ಆಯೋಜಿಸಿದ್ದು, ಈ ಮೇಳದಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳ ಪ್ರದರ್ಶನದ ಜೊತೆಗೆ ಮಾರಾಟ ಕೂಡಾ ಮಾಡಲಾಗುತ್ತೆ.
ತೋಟಗಾರಿಕಾ ಇಲಾಖೆ ಆಯೋಜಿಸಿದ 5 ದಿನಗಳ ಮಾವಿನ ಮೇಳ ಮಾವು ಬೆಳೆಗಾರರು ಮತ್ತು ಗ್ರಾಹಕರ ನಡುವಿನ ಸೇತುವೆಯಂತೆ ಕೆಲಸ ಮಾಡುತ್ತಿರೋ ತೋಟಗಾರಿಕೆ ಇಲಾಖೆ, ರೈತರಿಗೆ ಹಾಗೂ ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ನಿಗದಿತ ಬೆಲೆಗೆ ಮಾರಾಟ ಮಾಡುತ್ತಿದೆ. ಸಾಂಪ್ರದಾಯಿಕ ಶೈಲಿಯಲ್ಲಿಯೇ ಹಣ್ಣು ಮಾಡಲಾಗಿದ್ದು ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕ ಹಣ್ಣುಗಳಿಗಿಂತ ಆರೋಗ್ಯಕರವಾಗಿವೆ.
ರೈತರು ತಾವು ಬೆಳೆದ ಆಲ್ಪೋನ್ಸಾ, ಬೇನಿಶಾನ್, ಕಲ್ಮಿ, ರುಮಾನಿ ಮುಂತಾದ ಬಗೆ ಬಗೆಯ ಹಣ್ಣುಗಳನ್ನು ತಂದು ಪ್ರದರ್ಶನ ಮಾಡಿದ್ದಷ್ಟೇ ಅಲ್ಲದೇ ಮಾರಾಟ ಮಾಡುತ್ತಿದ್ದಾರೆ. ಹತ್ತಾರು ಬಗೆಯ ಹಣ್ಣುಗಳು ಒಂದೇ ಸೂರಿನಡಿ ಸಿಕ್ಕಿದ್ದರಿಂದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ.
ಒಂದು ಕಡೆ ರೈತರು ತಾವು ಬೆಳೆದ ಫಸಲಿಗೆ ಬೆಲೆ ಇಲ್ಲ ಅಂತಾ ನೋವು ಮಾಡಿಕೊಳ್ಳುತ್ತಿರುತ್ತಾರೆ. ಮತ್ತೊಂದು ಕಡೆ ಮಾರುಕಟ್ಟೆಗೆ ಒಯ್ದ ಫಸಲು ಮಾರಾಟದಲ್ಲಿ ಮಧ್ಯವರ್ತಿಗಳ ಕಾಟದಿಂದ ರೈತರಿಗೆ ಭಾರೀ ನಷ್ಟವಾಗುತ್ತೆ. ಆದ್ರೆ ಇಲ್ಲಿ ಅಂಥ ಯಾವುದೇ ಸಮಸ್ಯೆ ಇಲ್ಲದೇ ರೈತರಿಗೆ ತಾವು ಬೆಳೆದ ಮಾವಿನ ಹಣ್ಣುಗಳಿಗೆ ಸೂಕ್ತ ದರ ಸಿಗೋದಲ್ಲದೇ ಗ್ರಾಹಕರಿಗೂ ಕಡಿಮೆ ಬೆಲೆಗೆ ಹಣ್ಣು ಸಿಗುತ್ತಿರೋದು ಸಂತಸದ ವಿಷಯವೇ ಸರಿ.