ಹುಬ್ಬಳ್ಳಿ:ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಸಾಮಾಜಿಕ ಜಾಲತಾಣವನ್ನು ಸದ್ಬಳಕೆ ಮಾಡಿಕೊಂಡು ವಂಚನೆ ಮಾಡುವ ವಂಚಕರ ಜಾಲ ಸದ್ಯ ನಗರದಲ್ಲಿ ಫುಲ್ ಆ್ಯಕ್ಟಿವ್ ಆಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಯುವಕನೊಬ್ಬ ವಂಚಕ ಜಾಲದಲ್ಲಿ ಸಿಲುಕಿ ಒದ್ದಾಡಿದ್ದಾರೆ.
ವಿಡಿಯೋ ಕಾಲ್ ಮೂಲಕ ಸ್ಕ್ರೀನ್ ಶಾಟ್ ತೆಗೆದುಕೊಂಡು ಸಂತ್ರಸ್ತರನ್ನು ಬ್ಲಾಕ್ಮೇಲ್ ಮಾಡುವ ಮೂಲಕ ಆರೋಪಿಗಳು ವಂಚಿಸುತ್ತಿದ್ದಾರೆ. ವ್ಯಕ್ತಿಯೊಬ್ಬರಿಗೆ ಅಪರಿಚಿತ ಮಹಿಳೆಯೊಬ್ಬಳು ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಇವರ ಇಬ್ಬರ ಮಧ್ಯೆ ಸಲುಗೆ ಬೆಳೆದಿದೆ. ಆಗ ಯುವತಿ ನಗ್ನ ವಿಡಿಯೋ ಕಾಲ್ ಮಾಡಿ ರೆಕಾರ್ಡ್ ಮತ್ತು ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದಾಳೆ.
ವಿಡಿಯೋ ಕಾಲ್ ಮಾಡಿ ನಗ್ನ ದೃಶ್ಯ ತೋರಿಸಿದ ನಂತರ ಪೊಲೀಸ್ ಹೆಸರಲ್ಲಿ ಹಾಗೂ ಯುಟೂಬರ್ ಹೆಸರಲ್ಲಿ ಸಂತ್ರಸ್ತನಿಗೆ ಬೆದರಿಕೆ ಹಾಕಿದ್ದಾಳೆ. ಹಣ ನೀಡು ಈ ಎಲ್ಲ ವಿವರಗಳನ್ನು ಡಿಲಿಟ್ ಮಾಡ್ತಿನಿ, ಇಲ್ಲವಾದಲ್ಲಿ ಈ ಎಲ್ಲ ವಿವರಗಳನ್ನು ಪೊಲೀಸರಿಗೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಯುವತಿ ಸಂತ್ರಸ್ತನಿಗೆ ಬೆದರಿಕೆ ಹಾಕಿದ್ದಾಳೆ. ಹೀಗಾಗಿ ಯುವತಿಯ ಬೆದರಿಕೆಗೆ ಹೆದರಿದ ಸಂತ್ರಸ್ತ ಆಕೆಗೆ ನಾಲ್ಕು ಕಂತುಗಳಲ್ಲಿ ಸುಮಾರು 2.40 ಲಕ್ಷ ಹಣವನ್ನು ಪಾವತಿಸಿದ್ದಾರೆ. ಆದರೂ ಸಹ ಯುವತಿಯಿಂದ ಕಾಲ್ ಬರುತ್ತಲೇ ಇದೆ. ಇದರಿಂದ ಮನನೊಂದ ಸಂತ್ರಸ್ತ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.