ಹುಬ್ಬಳ್ಳಿ :ಶ್ರೀಮಂತ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರೊಂದಿಗೆ ಸಲುಗೆಯನ್ನು ಬೆಳೆಸಿ ಹನಿಟ್ರ್ಯಾಪ್ ಮಾಡಿ ಹಣವನ್ನು ಕಿತ್ತುಕೊಳ್ಳುತ್ತಿದ್ದ ಗ್ಯಾಂಗ್‌ಗೆ ಶಿಕ್ಷೆ ವಿಧಿಸಿ ಹುಬ್ಬಳ್ಳಿಯ 5ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ ಎನ್ ಗಂಗಾಧರ ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ :30-07-2017ರಂದು ಆರೋಪಿ ಅನುಭಾ ವಡವಿ ಎಂಬುವಳು ಪಿರ್ಯಾದಿದಾರನನ್ನು ಕಾರವಾರ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಉಳಿದ ಆರೋಪಿತರಿಗೆ ಅಲ್ಲಿಗೆ ಬರುವಂತೆ ತಿಳಿಸಿದ್ದಾಳೆ. ನಂತರ ಅಲ್ಲಿಗೆ ಆಗಮಿಸಿದ ಉಳಿದ ಆರೋಪಿಗಳು ಪಿರ್ಯಾದಿಗೆ ನೀನು ನಮ್ಮ ಹುಡುಗಿಯನ್ನು ರೇಪ್ ಮಾಡಲು ಕರೆದುಕೊಂಡು ಬಂದಿದ್ದೀಯ ಎಂದು ಆರೋಪಿಸಿ 4-5 ಲಕ್ಷ ರೂ. ಕೊಡುವಂತೆ ಒತ್ತಾಯಿಸಿದ್ದಾರೆ.
ಇದಕ್ಕೆ ಪಿರ್ಯಾದುದಾರ ಒಪ್ಪದಿದ್ದಾಗ ಆತನ ಕಿವಿಯ ಹಿಂಭಾಗದಲ್ಲಿ ಬಲಗೈ ಹಾಗೂ ಹೊಟ್ಟೆಯ ಮೇಲೆ ಮಾರಣಾಂತಿಕವಾಗಿ ಗಾಯಗೊಳಿಸಿ, ಆತನ ಬಳಿಯಿದ್ದ ಮೊಬೈಲ್ ಫೋನ್ ಎಟಿಎಂ ಕಾರ್ಡ್‌ನಿಂದ ಹಣವನ್ನು ತೆಗೆಸಿಕೊಂಡು ಶ್ರೀ ಸಿದ್ದಾರೂಢ ಮಠದ ಬಳಿ ಬಿಟ್ಟು ಹೋಗಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿತರಾದ ಗಣೇಶ ಶೆಟ್ಟಿ, ಆನಭಾ ವಡವಿ, ರಮೇಶ ಹಜಾರೆ ಹಾಗೂ ವಿನಾಯಕ ಹಜಾತೆ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 10,000 ರೂ. ದಂಡ ವಿಧಿಸಿದೆ. ತಪ್ಪಿದಲ್ಲಿ ಮೂರು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ನೀಡಿ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ವಾದವನ್ನು ಶ್ರೀಮತಿ ಸುಮಿತ್ರಾ ಎಂ. ಅಂಚಟಗೇರಿ ಮಂಡಿಸಿದರು.
ಓದಿ:ರಕ್ಷಣಾ ಪಡೆಗಳ ಸೇವೆ ಶ್ಲಾಘನೀಯ, ನಿಮ್ಮ ನೆರವಿಗೆ ಸರ್ಕಾರ ಸದಾ ಸಿದ್ಧ: ಸಿಎಂ ಅಭಯ