ಹುಬ್ಬಳ್ಳಿ:ಬಿಜೆಪಿಯವರು ಪ್ರಜಾಭುತ್ವವನ್ನ ಹತ್ತಿಕ್ಕಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ಬೆಂಗಳೂರಿನ ಜ್ಯೋತಿನಿವಾಸದಲ್ಲಿ ಕಾಲೇಜು ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡಲಾಗಿದೆ. ಇದು ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ. ಅಲ್ಲದೇ ಜೆಎನ್ಯುನಲ್ಲಿ ನಡೆದ ಘಟನೆ ಕೇಂದ್ರ ಸರ್ಕಾರದ ಪ್ರಾಯೋಜಿತ ದಾಳಿಯಾಗಿದೆ. ಇದರಲ್ಲಿ ನೇರವಾಗಿ ಅಮಿತ್ ಶಾ ಭಾಗವಹಿಸಿದ್ದಾರೆ. ಇನ್ನೂ ಕಾಂಗ್ರೆಸ್ ಸಿಎಎ ವಿರುದ್ದ ಪ್ರತಿಭಟನೆ ಮಾಡೇ ಇಲ್ಲ. ವಿನಾಃಕಾರಣ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು.
ಬಿಎಸ್ವೈ ಬರೀ ಸುಳ್ಳು ಹೇಳೋದು, ಶೆಟ್ಟರ್ ಅದಕ್ಕೆ ತಮಟೆ ಹೊಡೆಯೋದು, ಜೋಶಿ ತಾಳ ಹಾಕೋದು: ಸಿದ್ದು ಕಿಡಿ ಡಿ ಕೆ ಶಿವಕುಮಾರ್ ನನ್ನನ್ನು ಭೇಟಿ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೈಕಮಾಂಡ್ಗೆ ಬಿಟ್ಟಿದ್ದು. ಏನಾಗುತ್ತೆ ನೋಡೋಣ ಎಂದ ಅವರು, ನೆರೆ ಪರಿಹಾರ ವಿಚಾರದ ಕುರಿತು ಮಾತನಾಡಿದ ಅವರು, ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ. 6 ನೂರು ಚಿಲ್ಲರೆ ಕೋಟಿ ಬಂದಿದೆ. ಆದರೆ 1800 ಕೋಟಿ ಎನ್ನುತ್ತಾರೆ. 36 ಸಾವಿರ ಕೋಟಿ ನಷ್ಟವಾಗಿದೆ ಅಂತ ರಾಜ್ಯ ಸರ್ಕಾರವೇ ಹೇಳಿದೆ. ಕೇಂದ್ರ ಸರ್ಕಾರದ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ ಎಂದು ಕಿಡಿಕಾರಿದರು.
ಮಾಹದಾಯಿ ವಿಷಯದಲ್ಲಿ ಬಿಜೆಪಿ ತಮ್ಮನ್ನ ತಾವು ಸಮರ್ಥನೆ ಮಾಡಿಕೊಳ್ಳುತ್ತಿದೆ. ಪ್ರಧಾನಿ ಮೋದಿ ಮನಸು ಮಾಡಿದರೆ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಯುತ್ತೆ. ಮಹದಾಯಿ ವಿಷಯದಲ್ಲಿ ಬಿಎಸ್ವೈ ಬರೀ ಸುಳ್ಳು ಹೇಳುತ್ತಾರೆ. ಶೆಟ್ಟರ್ ಅದಕ್ಕೆ ತಮಟೆ ಹೊಡೆಯುತ್ತಾರೆ. ಜೋಶಿ ತಾಳ ಹಾಕುತ್ತಾರೆ. ಹಿಂದೆಯೂ ಕೂಡಾ ಅಧಿಕಾರಕ್ಕೆ ಬಂದ ಕೂಡಲೆ ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದರು. ಇವಾಗ ಏನ್ ಮಾಡಿದರು. ಆ ಬಗ್ಗೆ ಮಾತೇ ಆಡಲ್ಲ ಎಂದು ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.