ಟೆನೆಂಟ್ ಜಮೀನು ಉಳುಮೆ ಮಾಡುತ್ತಿದ್ದ ರೈತರಿಗೆ ಹಸ್ತಾಂತರ ಧಾರವಾಡ: ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದ ಜಮೀನಿನ ಖಾತೆಯಲ್ಲಿ ರೈತರ ಹೆಸರು ಇರಲಿಲ್ಲ. ಅದು ಬದಲಾಗಿ ಸರ್ಕಾರದ ಹೆಸರಿನಲ್ಲಿ ಇದ್ದವು. ಆ ಟೆನೆಂಟ್ ಜಮೀನನ್ನು ಇದೀಗ ಸಚಿವರು ಅನ್ನದಾತರ ಹೆಸರಿಗೆ ಮಾಡಿ, ಅವರಿಗೆ ಅನುಕೂಲ ಕಲ್ಪಿಸಲು ನಿರ್ಧರಿಸಿದ್ದಾರೆ.
ಹೌದು.. ಧಾರವಾಡ ಜಿಲ್ಲೆಯ ಕಲಘಟಗಿ, ಅಳ್ನಾವರ ಭಾಗದ ರೈತರು ಕಳೆದ ಹಲವು ದಶಕಗಳಿಂದ ಆ ಟೆನೆಂಟ್ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಬಂದು ಜೀವನ ಸಾಗಿಸುತ್ತಿದ್ದಾರೆ. ಆದರೆ ಅದು ಜಮೀನು ಅವರ ಹೆಸರಲ್ಲಿ ಇಲ್ಲ. ಬದಲಾಗಿ ಸರ್ಕಾರದ ಜಮೀನುವೆಂದು ಈಗಲೂ ನಮೂದಾಗಿದೆ. ಕಲಘಟಗಿ ಹಾಗೂ ಅಳ್ನಾವರ ತಾಲೂಕಿನಲ್ಲಿ ಸುಮಾರು 500 ಎಕರೆಗೂ ಹೆಚ್ಚು ಟೆನೆಂಟ್ ಜಮೀನನ್ನು ಗುರುತಿಸಲಾಗಿದೆ. ಅಲ್ಲಿ 200 ರೈತರು ಈ ಜಮೀನಿನಲ್ಲಿ ಉಳುಮೆ ಮಾಡುತ್ತ ಅದನ್ನು ನಂಬಿ ತಮ್ಮ ಜೀವನ ಸಾಗಿಸುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಟೆನೆಂಟ್ ಜಮೀನಿದೆ ಎಂಬುದರ ಕುರಿತು ಮಾಹಿತಿ ಪಡೆದಿದ್ದಾರೆ. ಟೆನೆಂಟ್ ಜಮೀನಿನಲ್ಲಿ ಉಳುಮೆ ಮಾಡುವವರ ಮಾಹಿತಿ ಕಲೆ ಹಾಕಿ ಅವರ ಹೆಸರಿಗೆ ಮಾಡಲು ಕ್ರಮ ಕೈಗೊಂಡಿದ್ದು, ಇದು ರೈತರಲ್ಲಿ ಖುಷಿ ಮೂಡಿಸಿದೆ.
ಈ ರೀತಿ ಸರ್ಕಾರ ಕ್ರಮ ಕೈಗೊಳ್ಳಲು ರೈತರು ಏಳು ದಶಕಗಳಿಂದ ಹೋರಾಟ ಮಾಡಿ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ, ಯಾರು ಕ್ಯಾರೇ ಎಂದಿರಲಿಲ್ಲ. ಹೀಗಾಗಿ ಸಚಿವ ಸಂತೋಷ್ ಲಾಡ್ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಟೆನೆಂಟ್ ಜಮೀನು ಎಂದು ಇರುವುದರಿಂದ ಸರ್ಕಾರದ ಯೋಜನೆಗಳಿಂದ ರೈತರಿಗೆ ಪರಿಹಾರ ಸಹ ಸಿಗುತ್ತಿರಲಿಲ್ಲ. ಇನ್ಮುಂದೆ ಸರ್ಕಾರ ರೈತರಿಗೆ ಜಮೀನು ಹಸ್ತಾಂತರ ಮಾಡಿದ ಮೇಲೆ ಎಲ್ಲ ರೀತಿಯ ಪರಿಹಾರ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಟೆನೆಂಟ್ ಫಾರ್ಮ ಸೊಸೈಟಿಯವರು 105 ರೈತರಿಗೆ 1951ರೊಳಗೆ ಜಮೀನು ಕೊಟ್ಟಿದ್ದರು. ಅವಾಗಿನಿಂದ ರೈತರಿಗೆ ಸರ್ಕಾರದ ಕೃಷಿ ಯೋಜನೆಗಳು ಸಿಗುತ್ತಿರಲಿಲ್ಲ. ಇವತ್ತು ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವ ಲಾಡ್ ಅವರ ನೇತೃತ್ವದೊಳಗೆ ಅಧಿಕಾರಿಗಳ ಸಭೆ ಕರೆದಿದ್ದು, ಎಲ್ಲ ರೈತರ ಹೊಲಗಳನ್ನು ವಾಪಸ್ಸು ತೆಗೆದುಕೊಂಡು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಾಪಸ್ ರೈತರಿಗೆ ಬಿಟ್ಟುಬಿಡುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ. ಇದು ಒಳ್ಳೆಯ ವಿಚಾರ. ರೈತರ ಹೆಸರಲ್ಲಿ ಇರದಿದ್ದರಿಂದ ಯಾವುದೇ ಸರ್ಕಾರದ ಯೋಜನೆ, ಕೃಷಿ ಸಲಕರಣೆಗಳು ಸಿಗದೇ ವಂಚಿತರಾಗಿದ್ದರು. ಈಗ ಜಿಲ್ಲಾ ಉಸ್ತುವಾರಿ ಸಚಿವ ಲಾಡ್ ಅವರ ನೇತೃತ್ವದೊಳಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿರುವುದು ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಸಂತೋಷ ಸಂಗೊಳ್ಳಿ, ಹೊಲ್ತಿಕೋಟಿ ಗ್ರಾಮದ ರೈತ.
ಇದನ್ನೂ ಓದಿ:₹250 ಕೋಟಿ ವೆಚ್ಚದ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಸತೀಶ ಜಾರಕಿಹೊಳಿ ಭೂಮಿಪೂಜೆ: ವೇದಿಕೆಯಲ್ಲೇ ಬಿಜೆಪಿ ಶಾಸಕರ ಅಸಮಾಧಾನ