ಕರ್ನಾಟಕ

karnataka

ETV Bharat / state

ನಮ್ಮಲ್ಲಿ ಎಲ್ಲದಕ್ಕೂ 'ಹೌದು ಹುಲಿಯಾ' ಅಂತ ಹೇಳೋ ಕಾರ್ಯಕರ್ತರಿಲ್ಲ:  ತೇಜಸ್ವಿ ಸೂರ್ಯ

ನಮ್ಮಲ್ಲಿ ಪ್ರಜ್ಞಾವಂತ ಕಾರ್ಯಕರ್ತರಿದ್ದಾರೆ. ಎಲ್ಲದ್ದಕ್ಕೂ ಹೌದು ಹುಲಿಯಾ ಅಂತ ಹೇಳೋ ಕಾರ್ಯಕರ್ತರಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

Tejasvi Surya attack on ex cm siddaramaiah
ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ

By

Published : Dec 25, 2019, 7:19 PM IST

Updated : Dec 25, 2019, 7:27 PM IST

ಹುಬ್ಬಳ್ಳಿ:ಪೌರತ್ವ (ತಿದ್ದುಪಡಿ) ಕಾಯ್ದೆಯು ದೇಶದ ಜನರ ಪೌರತ್ವ ಕಿತ್ತುಕೊಳ್ಳುವುದಿಲ್ಲ. ಅಷ್ಟೇ ಅಲ್ಲದೆ, ಇಲ್ಲಿನ ನಾಗರಿಕರಿಗೂ ರಾಷ್ಟ್ರೀಯ ಪೌರತ್ವ ಕಾಯ್ದೆಗೂ ಯಾವುದೇ ಸಂಬಂಧವಿಲ್ಲ. ಆದರೆ, ಈ ನಿಟ್ಟಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಬುದ್ಧಿಜೀವಿಗಳು ನೀಡುತ್ತಿರುವ ಪ್ರಚೋದನಕಾರಿ ಹೇಳಿಕೆ ಖಂಡನೀಯ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರ ಸರ್ಕಾರ ಈ ಬಗ್ಗೆ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಪ್ರತಿಪಕ್ಷಗಳು ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡಿವೆ. ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತರಬೇಕೆಂಬ ಕಾರಣದಿಂದ ಮಂಗಳೂರಿನಲ್ಲಿ ಕೋಮು ಗಲಭೆ ಮಾಡಿಸಿದರು. ಪುಂಡ ಪೋಕರಿಗಳ ಮೇಲಿರುವ 1600 ಕೇಸ್​​ಗಳನ್ನ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ತೆಗೆದು ಹಾಕಿದರು. 144 ಸೆಕ್ಷನ್​​ ಜಾರಿ ಮಾಡಿ ಟಿಪ್ಪು ಜಯಂತಿ ಆಚರಣೆ ಮಾಡಿ, ಮರಿ ಟಿಪ್ಪುಗಳನ್ನ ಹುಟ್ಟುಹಾಕುವಂತೆ ಮಾಡಿದ್ದು, ಇದೇ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದರು.

ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ

ಇನ್ನು ಗೋಲಿಬಾರ್​​ನಲ್ಲಿ ಮೃತಪಟ್ಟವರು ಗಲಭೆ ಮಾಡಲಿ ಎಂದು ಬಂದಿದ್ದರು. ಅವರಿಗೆ ಸರ್ಕಾರದಿಂದ ಪರಿಹಾರ ನೀಡುವುದಿಲ್ಲ ಎಂದಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆಯನ್ನು ಸ್ವಾಗತಿಸುವುದಾಗಿ ತಿಳಿಸಿದರು. ಭಾರತದ ನಾಗರಿಕರಿಗೆ ಸಿಎಎ ಸಂಬಂಧವೇ ಇಲ್ಲದ ಕಾನೂನು. ಜಾತಿ ಆಧಾರದ ಮೇಲೆ ವಿಭಜನೆ ಆಗುತ್ತಿಲ್ಲ. ದಾಖಲೆಗಳ ಆಧಾರದ ಮೇಲೆ ಎನ್​ಆರ್​ಸಿ ಜಾರಿ ಆಗುತ್ತೆ. ಯಾವುದೇ ನೆಗೆಟಿವ್ ಡಿಕ್ಲರೇಷನ್ ಈ ಕಾಯ್ದೆಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು‌.

ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಚಾರ ಭಾಷಣದಲ್ಲಿ ಸಿಎಎ ಮತ್ತು ಎನ್​ಆರ್​ಸಿ ಬಗ್ಗೆ ಮಾತನಾಡಿದ್ದಾರೆ. ಪ್ರಣಾಳಿಕೆ ತಯಾರಿ ಹಂತದಲ್ಲೂ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದ್ದೇವೆ. 72 ಗಂಟೆಗೂ ಹೆಚ್ಚು ಕಾಲ ಡಿಬೇಟ್ ಮಾಡಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೆಲ್ಲ ತಿಳಿಸೋಕೆ ಜನಜಾಗೃತಿ ಮಾಡುತ್ತಿದ್ದೇವೆ. ಜನರ ದಿಕ್ಕು ತಪ್ಪಿಸುವ ರಾಜಕಾರಣಿಗಳಿಂದ ನಾವು ಈ ಕಾರ್ಯ ಮಾಡುತ್ತಿದ್ದೇವೆ. ನಮ್ಮಲ್ಲಿ ಪ್ರಜ್ಞಾವಂತ ಕಾರ್ಯಕರ್ತರಿದ್ದಾರೆ. ಎಲ್ಲದ್ದಕ್ಕೂ ಹೌದು ಹುಲಿಯಾ ಅಂತ ಹೇಳೋ ಕಾರ್ಯಕರ್ತರಿಲ್ಲ. ಅಲ್ಪಸಂಖ್ಯಾತರನ್ನ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್ ದೇಶದ್ರೋಹದ ಕೆಲಸ ಮಾಡುತ್ತಿದೆ. ಕೋಮು ಗಲಭೆಗೆ ಪ್ರಚೋದನೆ ನೀಡುವ ಮೂಲಕ ಇನ್ನೊಂದು ಸಮುದಾಯದ ಮೇಲೆ ಎತ್ತಿಕಟ್ಟೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.

Last Updated : Dec 25, 2019, 7:27 PM IST

ABOUT THE AUTHOR

...view details